ರೊಬೋಟಿ ಮೂಲಕ ಮುದ್ದೇನಹಳ್ಳಿ ಸಾಯಿ ಮಧುಸೂದನ ವೈದ್ಯಕೀಯ ಸಂಸ್ಥೆಯಲ್ಲಿ ಮಹಿಳೆಗೆ ಯಶಸ್ವಿ ಹೃದಯ ಶಸ್ತçಚಿಕಿತ್ಸೆ
ರೊಬೋಟಿ ಮೂಲಕ ಮುದ್ದೇನಹಳ್ಳಿ ಸಾಯಿ ಮಧುಸೂದನ ವೈದ್ಯಕೀಯ ಸಂಸ್ಥೆಯಲ್ಲಿ ಮಹಿಳೆಗೆ ಯಶಸ್ವಿ ಹೃದಯ ಶಸ್ತçಚಿಕಿತ್ಸೆ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸಾಯಿ ಮಧುಸೂದನ್ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ರೋಬೋಟಿಕ್ ಮೂಲಕ ಕೋಲಾರದ ಮಹಿಳೆಯೊಬ್ಬರಿಗೆ ಯಶಸ್ವಿ ಹೃದಯ ಶಸ್ತಚಿಕಿತ್ಸೆ ನಡೆಸಲಾಯಿತು.


ಕೋಲಾರ,09 ಅಕ್ಟೋಬರ್ (ಹಿ.ಸ) : ಸಾಗರದಾಚೆ ಸ್ಪೇನ್ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು ೧೨ ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಇದೊಂದು ಅಪೂರದಲ್ಲಿ ಅಪರೂಪವಾದ ಹೃದಯ ಶಸ್ತç ಚಿಕಿತ್ಸೆಯಾಗಿದೆ. ಶಸ್ತç ಚಿಕಿತ್ಸೆ ಯಶಸ್ವಿಯಾಗುತ್ತಿದ್ದಂತೆ ಮುದ್ದೇನಹಳ್ಳಿಯ ಮಧೂಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಮತ್ತು ರೋಗಿಯ ಕುಟುಂಬದ ಸದಸ್ಯರ ಹೃದಯಗಳು ಯಶಸ್ವಿ ಶಸ್ತçಚಿಕಿತ್ಸೆಗೆ ಮಿಡಿದವು.

ಮುದ್ದೇನಹಳ್ಳಿಯ ಮಧೂಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಮುಖ ವೈದ್ಯರಾದ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದಲೇ ರೋಬೋಟ್ ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.

ಕೋಲಾರ ಜಿಲ್ಲೆಯ ೨೬ ವರ್ಷದ ಮಹಿಳೆ ಹೃದಯದ ಮೇಲಿನ ಎರಡು ಕವಾಟಗಳ ನಡುವೆ ಜನ್ಮತಃ ರಂಧ್ರವಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ನೀಡಲಾಯಿತು.

ಬಾರ್ಸಿಲೋನಾದಲ್ಲಿ ಅಳವಡಿಸಲಾಗಿದ್ದ ರೋಬೋಟಿಕ್ ಶಸ್ತçಚಿಕಿತ್ಸಾ ಕನ್ಸೋಲ್ ಮೂಲಕ ಡಾ. ಸುಧೀರ್ ಶ್ರೀವಾಸ್ತವ ಅವರು ಮುದ್ದೇನಹಳ್ಳಿಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ‘ಎಸ್ಎಸ್ಐ ಮಂತ್ರ’ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು.

ಮಣಿಪಾಲ್ ಆಸ್ಪತ್ರೆಯ ಜೈಪುರ ಘಟಕದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಲಲಿತ್ ಮಲಿಕ್ ಮತ್ತು ಮುದ್ದೇನಹಳ್ಳಿಯ ಸಂಸ್ಥೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿ. ಎಸ್. ಹಿರೇಮಠ ಅವರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಾದ ನೆರವು ನೀಡಿದರು. ರೋಗಿಯ ಆರೋಗ್ಯದ ಮೇಲೂ ನಿರಂತರ ನಿಗಾ ವಹಿಸಿದರು.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದ್ದು, ಸುಮಾರು ಆರು ಗಂಟೆಗಳ ನಂತರ ಉಸಿರಾಟಕ್ಕೆ ಅಳವಡಿಸಿದ್ದ ಟ್ಯೂಬ್ ಅನ್ನು ತೆಗೆದುಹಾಕಲಾಯಿತು ಎಂದು ಆಸ್ಪತ್ರೆ ತಿಳಿಸಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಮೂರು ಸಣ್ಣ ಛೇದನಗಳನ್ನು ಮಾಡಲಾಗಿದ್ದು, ಪ್ರತಿಯೊಂದೂ ಐದು ಮಿಲಿಮೀಟರ್ಗಿಂತ ಕಡಿಮೆ ಗಾತ್ರದ್ದಾಗಿತ್ತು. ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಿತ್ತು ಎಂದು ಸಂಸ್ಥೆ ಹೇಳಿದೆ.

ಈ ಹಿಂದೆ ಮುದ್ದೇನಹಳ್ಳಿಯ ಇದೇ ಆಸ್ಪತ್ರೆಯಲ್ಲಿ ಗುರುಗ್ರಾಮ್ನಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸ್ಪೇನ್ನ ಬಾರ್ಸಿಲೋನಾದಿಂದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ತಂತ್ರಜ್ಞಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸಾಧ್ಯತೆಯನ್ನು ತೋರಿಸಲಾಗಿದೆ.

ದೂರದಿಂದಲೇ ರೋಬೋಟ್ ನಿಯಂತ್ರಿಸಿ ನಡೆಸುವ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ಗ್ರಾಮೀಣ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿರುವ ಪ್ರದೇಶಗಳಿಗೂ ಪರಿಣತ ವೈದ್ಯರ ಸೇವೆ ತಲುಪಿಸಲು ನೆರವಾಗಬಹುದು. ವೈದ್ಯಕೀಯ ಶಿಕ್ಷಣ, ಶಸ್ತ್ರಚಿಕಿತ್ಸಾ ತರಬೇತಿ ಮತ್ತು ವಿವಿಧ ದೇಶಗಳ ತಜ್ಞ ವೈದ್ಯರ ಸಹಯೋಗಕ್ಕೂ ಇದು ಅವಕಾಶ ಕಲ್ಪಿಸಲಿದೆ. ಆದರೆ ಇಂತಹ ಶಸ್ತ್ರಚಿಕಿತ್ಸೆಗಳಿಗೆ ವಿಶ್ವಾಸಾರ್ಹ ಸಂವಹನ ವ್ಯವಸ್ಥೆ, ಸ್ಥಳೀಯ ವೈದ್ಯಕೀಯ ತಂಡದ ಸಮನ್ವಯ ಹಾಗೂ ಸೂಕ್ತ ಸುರಕ್ಷತಾ ಕ್ರಮಗಳು ಅತ್ಯಗತ್ಯ.

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಇಬ್ಬರು ಮಕ್ಕಳ ತಾಯಿ. ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಇಂತಹ ದುಬಾರಿ ಚಿಕಿತ್ಸೆಯನ್ನು ಪಡೆಯುವುದು ಈ ಕುಟುಂಬಕ್ಕೆ ಕಷ್ಟಸಾಧ್ಯವಾಗಿತ್ತು. ಆದರೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶಸ್ತ್ರಚಿಕಿತ್ಸೆ ಸೇರಿದಂತೆ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande