ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಅನುಷ್ಟಾನ ಮಾಡದೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನಿರ್ಲಕ್ಷ್ಯ
ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಅನುಷ್ಟಾನ ಮಾಡದೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನಿರ್ಲಕ್ಷö್ಯ
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್


ಕೋಲಾರ,09 ಅಕ್ಟೋಬರ್ (ಹಿ.ಸ.) : ಕೋಲಾರ ನಗರದಲ್ಲಿ ನಾಗರೀಕರಿಂದ ಅಕ್ರಮವಾಗಿ ನೀರು ಪೂರೈಕೆಗೆ ಹಣ ವಸೂಲಿ ಮಾಡುತ್ತಿದ್ದ ವಾಟರ್ಮೆನ್ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಬೆನ್ನಲ್ಲೇ, ಅವರನ್ನು ಸಮರ್ಥಿಸಿಕೊಂಡು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರನ್ನು ಅಮಾನತ್ತುಗೊಳಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರು. ಆದರೆ, ಈ ನಿರ್ದೇಶನವನ್ನು ಜಾರಿಗೊಳಿಸಬೇಕಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕಚೇರಿಗೆ ಬಾರದೆ ನಾಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ಅನುಮಾನಕ್ಕೆ ಗ್ರಾಸವಾಗಿದೆ.

ಕೋಲಾರ ನಗರದ ಪಾಲಸಂದ್ರ ಹಾಗೂ ಆರ್.ಜಿ. ಬಡಾವಣೆಯ ನಿವಾಸಿಗಳಿಂದ ನೀರು ಪೂರೈಕೆಗೆ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವಾಟರ್ಮೆನ್ಗಳಾದ ರಮೇಶ್ ಮತ್ತು ಶ್ರೀನಾಥ್ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು. ಸಾರ್ವಜನಿಕರ ದೂರಿನ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ಅಕ್ರಮವಾಗಿ ಸುಲಿಗೆಯಲ್ಲಿ ತೊಡಗಿದ್ದ ವಾಟರ್ಮೆನ್ಗಳನ್ನು ತಕ್ಷಣವೇ ಸೇವೆಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಿದ್ದರು.

ಈ ನಡುವೆ, ವಾಟರ್ಮೆನ್ಗಳ ಅಕ್ರಮ ಕೃತ್ಯವನ್ನು ಸಮರ್ಥಿಸಿಕೊಂಡು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಜಿಲ್ಲಾಧಿಕಾರಿಗಳ ಮೇಲೆ ಪ್ರಾಥಮಿಕ ಶಿಕ್ಷಕ ಮಂಜುನಾಥ್ ಅವರು ಅನಗತ್ಯ ಒತ್ತಡ ಹೇರಲು ಯತ್ನಿಸಿದ್ದರು. ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ, ಪ್ರಭಾವ ಬಳಸಲು ಮುಂದಾದ ಶಿಕ್ಷಕನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಮಂಜುನಾಥ್ ಅವರನ್ನು ತಕ್ಷಣವೇ ಅಮಾನತ್ತುಪಡಿಸುವಂತೆ ನೆನ್ನೆಯ ದಿನ ಉಪ ನಿರ್ದೇಶಕರಿಗೆÀ ಸ್ಪಷ್ಟ ನಿರ್ದೇಶನ ನೀಡಿದ್ದರು.

ಆದರೆ, ಜಿಲ್ಲಾಧಿಕಾರಿಗಳ ಈ ನಿರ್ದೇಶನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್ ಪರ್ವೀಜ್ ಅವರು ಕಳೆದ ಎರಡು ದಿನಗಳಿಂದ ಕಚೇರಿಗೆ ಬಾರದೆ ನಾಪತ್ತೆಯಾಗಿದ್ದಾರೆ. ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದೆ ಕಚೇರಿಯಿಂದ ದೂರ ಉಳಿದಿರುವುದು ಹಾಗೂ ಆಡಳಿತ ಯಂತ್ರದ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಂಗಾರಪೇಟೆಯಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಭೆ ನಡೆಸಿದ ನಂತರ ನೇರವಾಗಿ ಬೆಂಗಳೂರಿಗೆ ತೆರಳಿದರೆಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಸಾರ್ವಜನಿಕ ಹಿತಾಸಕ್ತಿಯ ಗಂಭೀರ ಪ್ರಕರಣವೊಂದರಲ್ಲಿ ಉನ್ನತ ಅಧಿಕಾರಿಯೊಬ್ಬರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಕಡೆಗಣಿಸುತ್ತಿರುವ ಈ ಧೋರಣೆ ಕೋಲಾರ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಒತ್ತಡಕ್ಕೆ ಉಪ ನಿರ್ದೇಶಕರು ಮಣಿದಿರಬಹುದೆಂದು ಶಂಕಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande