




ಬಳ್ಳಾರಿ, 09 ಅಕ್ಟೋಬರ್ (ಹಿ.ಸ.)
ಹಳೆಯ ದ್ವೇಷದ ಹಿನ್ನಲೆಯಲ್ಲಿ ಬಳ್ಳಾರಿಯ ತಾಳೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದ ಗುಂಪು ಗಲಭೆಯಲ್ಲಿ ಒಬ್ಬನ ಹತ್ಯೆಯ ಪ್ರಯತ್ನ ನಡೆದಿದ್ದು, ಐವರು ಆರೋಪಿಗಳನ್ನು ಕನಕಗಿರಿ ಪೊಲೀಸರು ವಶಕ್ಕೆ ಪಡೆದು, ಬಳ್ಳಾರಿಯ ಗಾಂಧಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪೆನ್ನೇಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗುರುವಾರ ಕೋರ್ಟ್ನಲ್ಲಿ ತನ್ನ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಮಧು (27) ಅವರ ಮೇಲೆ ರೌಡಿಶೀಟರ್ಗಳ ಗುಂಪೊಂದು ಇವರನ್ನು ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡುವ ಕಾರಣಕ್ಕಾಗಿ ತೀವ್ರವಾಗಿ ಹಲ್ಲೆ ನಡೆಸಿತ್ತು.
ಗುಂಪು ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಧು, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಹಿನ್ನಲೆಯಲ್ಲಿ, ಪೊಲೀಸರು ಗುಂಪು ಹಲ್ಲೆಯಲ್ಲಿ ಪಾಲ್ಗೊಂಡಿದ್ದ ರೌಡಿಶೀಟರ್ಗಳ ಹುಡುಕಾಟವನ್ನು ಪ್ರಾರಂಭಿಸಿದಾಗ, ಆರೋಪಿಗಳು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಆದರೆ, ಆರೋಪಿಗಳ ಪೈಕಿ ಐವರು (05) ಕನಕಗಿರಿಯ ಆಸುಪಾಸಿನಲ್ಲಿ ಇರುವುದನ್ನು ಪತ್ತೆ ಮಾಡಿ, ಕನಕಗಿರಿ ಪೊಲೀಸರ ನೆರವಿನಿಂದ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಫೈನಾನ್ಸ್ ಕೆಲಸ ಮಾಡುವ ತಾಳಾರು ರಸ್ತೆ ನಿವಾಸಿ ಸತೀಶ ತಂದೆ ವೆಂಕಣ್ಣ (34), ತಾಳೂರು ರಸ್ತೆಯ ನಿವಾಸಿ ವಿಕ್ರಮ್ @ ವಿಕ್ಕಿ ತಂದೆ ಚಂದ್ರಹಾಸ್ (33), ಬೆಳಗಲ್ಲು ಕ್ರಾಸ್ನ ರವಿ @ ಡೀಲ್ ರವಿ ತಂದೆ ಬಂಡೇಗೌಡ (36), ಬಸವನಕುಂಟೆ ನಿವಾಸಿ ಶೆಕ್ಷಾವಲಿ ತಂದೆ ಮಸ್ತಾನ್ (28) ಮತ್ತು ಇಂದಿರಾನಗರದ ಕಲೀಲ್ ಬಾಷಾ ತಂದೆ ಸಾಧೀಕ್ ಬಾಷ (28) ಆಗಿದ್ದು, ಈ ಘಟನೆಯಲ್ಲಿ ಪಾಲ್ಗೊಂಡಿರುವ ನಾಲ್ಕು ಆರೋಪಿಗಳು ಪರಾರಿ ಆಗಿದ್ದಾರೆ. ಆರೋಪಿಗಳ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಂಧಿತರಿಂದ ಒಂದು ಕಾರು, 3 ಮೋಟಾರ್ ಸೈಕಲ್ಗಳು, ದೂರುದಾರರಿಗೆ ಹೊಡೆಯಲು ಬಳಸಿದ ಕಟ್ಟಿಗೆ, ಇನ್ನಿತರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ನಂತರ ನಗರದ 25 ರೌಡಿಶೀಟರ್ಗಳ ಮನೆಗಳಲ್ಲಿ ಪೊಲೀಸರು ಶೋಧ ನಡೆಸಿ, ಮಾಹಿತಿ ಪಡೆದಿದ್ದಾರೆ. ಬಂಧಿತರಲ್ಲಿ ರವಿ @ ಡೀಲ್ ರವಿ ರೌಡಿಶೀಟರ್ ಆಗಿದ್ದಾನೆ. ಈ ಘಟನೆಯು ಹಳೆಯ ದ್ವೇಷದಿಂದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ:152/2026, ಕಲಂ: 109(1), 126(2), 189(1), 189(2), 191(2), 115(2), 118(1), 351(3), 352, ಆಧಾರ 190 ಬಿ.ಎನ್.ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್