ಮುಖ್ಯಮಂತ್ರಿಗಳ ವಿರುದ್ಧದ ಷಡ್ಯಂತ್ರದ ದಾಖಲೆ ಬಹಿರಂಗಪಡಿಸಿ: ಆರ್. ಅಶೋಕ ಆಗ್ರಹ
ಬೆಂಗಳೂರು, 09 ಅಕ್ಟೋಬರ್ (ಹಿ.ಸ.): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಂಶಗಳನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಪ್ರತಿಪಕ್ಷ ನಾಯಕ ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 09 ಅಕ್ಟೋಬರ್ (ಹಿ.ಸ.):

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಂಶಗಳನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳ ವಿರುದ್ಧವೇ ಸ್ಟಿಂಗ್ ಕಾರ್ಯಾಚರಣೆ ನಡೆಸಲು ಷಡ್ಯಂತ್ರ ರೂಪಿಸಲಾಗಿದೆ ಎಂದಾದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕಿತ್ತು ಎಂದು ಹೇಳಿದ್ದಾರೆ.

ಗುಪ್ತಚರ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆ ಸರ್ಕಾರದ ಅಧೀನದಲ್ಲಿವೆ. ಮುಖ್ಯಮಂತ್ರಿಗಳೇ ತಮ್ಮ ವಿರುದ್ಧದ ಷಡ್ಯಂತ್ರವನ್ನು ಬಹಿರಂಗಪಡಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರ ಸುರಕ್ಷತೆಯ ಗತಿಯೇನು ಎಂದು ಪ್ರಶ್ನಿಸಿರುವ ಅವರು, ಸೂಕ್ತ ಸಮಯ ಬಂದಾಗ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಹೇಳಿ ವಿಷಯವನ್ನು ಮುಂದೂಡುವ ಬದಲು ಈಗಲೇ ಸತ್ಯಾಂಶಗಳನ್ನು ಜನರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಯಾರ್ಯಾರನ್ನು ಸಿಲುಕಿಸಲು ಪ್ರಯತ್ನಿಸಲಾಗಿತ್ತು ಮತ್ತು ಅಂತಹ ಯಾವೆಲ್ಲ ಪ್ರಕರಣಗಳು ಚರ್ಚೆಗೆ ಬಂದಿದ್ದವು ಎಂಬುದನ್ನು ಕರ್ನಾಟಕದ ಜನತೆ ಮರೆತಿಲ್ಲ ಎಂದು ಅಶೋಕ ಹೇಳಿದ್ದಾರೆ.

ರಾಜ್ಯದ ಜನರಿಗೆ ಸ್ಫೋಟಕ ಹೇಳಿಕೆಗಳಿಗಿಂತ ಸುರಕ್ಷತೆ ಮತ್ತು ಉತ್ತರದಾಯಿತ್ವ ಮುಖ್ಯ. ಹೀಗಾಗಿ, ಮುಖ್ಯಮಂತ್ರಿಗಳು ಆರೋಪಗಳ ಹಿಂದಿನ ಸತ್ಯವನ್ನು ಜನರ ಮುಂದಿಡಬೇಕು ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande