ಯತ್ನಾಳಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಜಪೂತ ಬಹಿರಂಗ ಸವಾಲು
ವಿಜಯಪುರ, 09 ಅಕ್ಟೋಬರ್ (ಹಿ.ಸ.) ವಿಜಯಪುರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸತ್ತಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯತ್ನಾಳ ಅವರಿಗೆ ಬಹಿರಂಗ ಸವ
Savala


ವಿಜಯಪುರ, 09 ಅಕ್ಟೋಬರ್ (ಹಿ.ಸ.)

ವಿಜಯಪುರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸತ್ತಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯತ್ನಾಳ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬಿಜೆಪಿ ಪಕ್ಷದ ಚಿಹ್ನೆಯಿಂದಲೇ ಆಯ್ಕೆಯಾಗಿ ಬಂದಿರುವ ಯತ್ನಾಳ ಅವರು ಇದೀಗ ಅದೇ ಪಕ್ಷದ ವಿರುದ್ಧ ಟೀಕೆ ಮಾಡುತ್ತಿರುವುದು ಸರಿಯಲ್ಲ. ತಾವು ಸ್ವಂತ ಬಲದಿಂದ ಆಯ್ಕೆಯಾಗಿದ್ದೇವೆ ಎಂಬ ವಿಶ್ವಾಸ ಅಥವಾ ತಾಕತ್ತು ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ. ನಂತರ ಬಿಜೆಪಿಯಿಂದ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಪಕ್ಷದ ಸಂಘಟನಾ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ರಜಪೂತ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷದಿಂದಲೇ ಕೇಂದ್ರ ಸಚಿವರಾಗಿ, ಶಾಸಕರಾಗಿ ಹಾಗೂ ಸಂಸದರಾಗಿ ಆಯ್ಕೆಯಾಗಿರುವ ಯತ್ನಾಳ ಅವರು ಇದೀಗ ಬಿಜೆಪಿ ಪಕ್ಷವನ್ನೇ ಟೀಕಿಸುತ್ತಿರುವುದು ವಿಪರ್ಯಾಸವಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತಹ ಹಿರಿಯ ನಾಯಕರ ವಿರುದ್ಧವೂ ಯತ್ನಾಳ ಅವರು ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

“ಪಕ್ಷವು ಯತ್ನಾಳ ಅವರಿಗೆ ಹಲವು ಅವಕಾಶಗಳನ್ನು ನೀಡಿದೆ. ಪಕ್ಷದ ಚಿಹ್ನೆಯಿಂದಲೇ ಅವರು ಹಲವು ಬಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಅನುಭವಿಸಿದ್ದಾರೆ. ಆದರೆ ಇಂದು ಅದೇ ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡುವುದು ಎಷ್ಟು ಸರಿ?” ಎಂದು ರಜಪೂತ ಪ್ರಶ್ನಿಸಿದ್ದಾರೆ.

ಬಿಜೆಪಿ ಸತ್ತಿಲ್ಲ, ಇನ್ನಷ್ಟು ಬಲಿಷ್ಠವಾಗಿದೆ

ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ದುರ್ಬಲವಾಗಿಲ್ಲ. ಪಕ್ಷವು ಜಿಲ್ಲೆಯಲ್ಲಿ ಬಲಿಷ್ಠ ಸಂಘಟನಾ ವ್ಯವಸ್ಥೆಯನ್ನು ಹೊಂದಿದ್ದು, ಸಾವಿರಾರು ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಯತ್ನಾಳ ಅವರಂತಹವರು ಪಕ್ಷದಿಂದ ಹೊರಗುಳಿದ ಬಳಿಕವೂ ಬಿಜೆಪಿ ಸಂಘಟನೆ ಮತ್ತಷ್ಟು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ರಜಪೂತ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಬಿಜೆಪಿ ವಿವಿಧ ಸಂಘಟನಾ ಕಾರ್ಯಕ್ರಮಗಳು, ಸೇವಾ ಸಂಕಲ್ಪ ಅಭಿಯಾನ ಸೇರಿದಂತೆ ಪಕ್ಷದ ಚಟುವಟಿಕೆಗಳಲ್ಲಿ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿರುವುದು ಪಕ್ಷದ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೊಸ ಸಂಕಲ್ಪದೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಅಹಂಕಾರದಿಂದ ಹೊರಬರಲಿ”

ಯತ್ನಾಳ ಅವರು ತಮ್ಮ ವೈಯಕ್ತಿಕ ರಾಜಕೀಯ ದೃಷ್ಟಿಕೋನದಿಂದ ಬಿಜೆಪಿ ಬಗ್ಗೆ ಮಾತನಾಡುವ ಬದಲು ಪಕ್ಷದ ನೆಲಮಟ್ಟದ ವಾಸ್ತವಾಂಶವನ್ನು ಗಮನಿಸಬೇಕು. ಪಕ್ಷದ ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಶಕ್ತಿ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಜನರ ಬೆಂಬಲವನ್ನು ಅರಿತು ಮಾತನಾಡಬೇಕು ಎಂದು ರಜಪೂತ ಸಲಹೆ ನೀಡಿದ್ದಾರೆ.

“ಯತ್ನಾಳ ಅವರು ಗೆದ್ದಿರುವುದು ಬಿಜೆಪಿ ಚಿಹ್ನೆಯಿಂದ ಎಂಬುದನ್ನು ಮರೆಯಬಾರದು. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾದ ಸಂಘಟನೆಯನ್ನು ಹೊಂದಿದೆ. ಪಕ್ಷದ ನಿಷ್ಠಾವಂತ ಹಾಗೂ ಬಲಿಷ್ಠ ಕಾರ್ಯಕರ್ತರ ಬೆಂಬಲದಿಂದಲೇ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದ್ದಾರೆ.

ಹಿಂದಿನ ಸೋಲನ್ನು ನೆನಪಿಸಿದ ರಜಪೂತ

ಯತ್ನಾಳ ಅವರ ರಾಜಕೀಯ ಹಿನ್ನೆಲೆಯನ್ನು ಉಲ್ಲೇಖಿಸಿರುವ ರಜಪೂತ, ಬೇರೆ ಪಕ್ಷದಿಂದ ವಿಜಯಪುರ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಬಳಿಕ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮನವೊಲಿಕೆಯೊಂದಿಗೆ ಮತ್ತೆ ಬಿಜೆಪಿಗೆ ಮರಳಿದ ವಿಚಾರವೂ ಸಾರ್ವಜನಿಕ ಜೀವನದಲ್ಲಿದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಪಕ್ಷದ ಬಗ್ಗೆ ಟೀಕೆ ಮಾಡುವ ಮೊದಲು ತಮಗೆ ರಾಜಕೀಯವಾಗಿ ಬಲ ನೀಡಿದ ಸಂಘಟನೆ ಹಾಗೂ ಕಾರ್ಯಕರ್ತರ ಕೊಡುಗೆಯನ್ನು ಯತ್ನಾಳ ಅವರು ಪರಿಗಣಿಸಬೇಕು ಎಂದು ರಜಪೂತ ಒತ್ತಾಯಿಸಿದ್ದಾರೆ.

“ರಾಜೀನಾಮೆ ನೀಡಿ, ಪಕ್ಷದ ಶಕ್ತಿ ತೋರಿಸುತ್ತೇವೆ”

“ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಗೆಲ್ಲುವ ಸಾಮರ್ಥ್ಯವಿದೆ ಎಂದು ಯತ್ನಾಳ ಅವರಿಗೆ ನಂಬಿಕೆ ಇದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ. ಬಿಜೆಪಿ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸುತ್ತದೆ. ಆ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಸಂಘಟನಾ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ” ಎಂದು ರಜಪೂತ ಪುನರುಚ್ಚರಿಸಿದ್ದಾರೆ.

ಪಕ್ಷದ ವಿರುದ್ಧ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾಡಿರುವ ಟೀಕೆಗಳಿಗೆ ಯತ್ನಾಳ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಬಿಜೆಪಿ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡಬೇಕು. ಇನ್ನಾದರೂ ಪಕ್ಷದ ಬಗ್ಗೆ ಅಗೌರವ ತರುವ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande