
ಬೆಂಗಳೂರು, 08 ಅಕ್ಟೋಬರ್ (ಹಿ.ಸ.):
ಅತೀ ವೇಗದಿಂದಾಗಿ ಕೆಟಿಎಂ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿ ಉರುಳಿ ಬಿದ್ದ ಪರಿಣಾಮ ಸಾಫ್ಟ್ವೇರ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಹೆಬ್ಬಾಳದ ಕೆಂಪಾಪುರದ ವೆಂಕಟೇಗೌಡ ಲೇಔಟ್ ನಿವಾಸಿ ಪುನೀತ್ ಯಾದವ (37) ಮೃತಪಟ್ಟ ಟೆಕ್ಕಿ.ಮಾನ್ಯತಾ ಟೆಕ್ಪಾರ್ಕ್ನಲ್ಲಿ ಕಂಪನಿಯೊಂದರ ಸಾಫ್್ಟವೇರ್ ಎಂಜಿನಿಯರ್ ಪುನೀತ್ ಯಾದವ ಅವರು ಬೆಳಗಿನ ಜಾವ 12 ಗಂಟೆ ಸುಮಾರಿನಲ್ಲಿ ಕೆಟಿಎಂ ಬೈಕ್ನಲ್ಲಿ ಸಿಂದೂ ಯಾದವ(24)ಅವರನ್ನು ಕರೆದುಕೊಂಡು ಹೋಗುತ್ತಿದ್ದರು.
ಸಂದೀಪ್ ಉನ್ನಿಕೃಷ್ಣನ್ ಮುಖ್ಯರಸ್ತೆಯಲ್ಲಿನ ದೊಡ್ಡಬೆಟ್ಟಹಳ್ಳಿ ಲೇಔಟ್ ಕಡೆಯಿಂದ ಯಲಹಂಕ ಮಾರ್ಗವಾಗಿ ಅತಿ ವೇಗವಾಗಿ ಹೋಗುತ್ತಿದ್ದಾಗ ಅದೇ ರಸ್ತೆಯ ಅರವಿಂದ ಬೆಲೆರ್ ಅಪಾರ್ಟ್ಮೆಂಟ್ ಬಳಿಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಅಪ್ಪಳಿಸಿ ಇಬ್ಬರೂ ನೆಲಕ್ಕುರುಳಿದ್ದಾರೆ.
ಪರಿಣಾಮ ಪುನೀತ್ ಯಾದವ ಅವರ ತಲೆ,ಮುಖ,ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಸಹಾಯಕ್ಕೆ ದಾವಿಸಿ ಬಂದು ಪುನೀತ್ ಅವರನ್ನು ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ಅವರನ್ನು ಪರೀಕ್ಷಿಸಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಸಿಂದೂ ಯಾದವ ಅವರು ಅಟ್ಟೂರು ಲೇಔಟ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೈಕ್ ಸವಾರನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸ್ವಯಂ ಅಪಘಾತವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R