ಏಷ್ಯನ್ ಪ್ಯಾರಾ ಅಥ್ಲೆಟಿಕ್ಸ್ ಗೆ ರಾಧಾ ವೆಂಕಟೇಶ್ ಆಯ್ಕೆ: ಅಗತ್ಯ ನೆರವಿನ ಭರವಸೆ ನೀಡಿದ ಸಚಿವ ಸಂತೋಷ್ ಲಾಡ್
ಏಷ್ಯನ್ ಪ್ಯಾರಾ ಅಥ್ಲೆಟಿಕ್ಸ್ಗೆ ಆಯ್ಕೆಯಾಗಿರುವ ಪ್ಯಾರಾ ಅಥ್ಲೀಟ್ ರಾಧಾ ವೆಂಕಟೇಶ್ ಅವರನ್ನು ಸಚಿವ ಸಂತೋಷ್ ಲಾಡ್ ಸನ್ಮಾನಿಸಿ, ಅಗತ್ಯ ನೆರವು ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
minister-santosh-lad-assures-support-to-para-athlete-radha-venkatesh


ಬೆಂಗಳೂರು, 08 ಅಕ್ಟೋಬರ್ (ಹಿ.ಸ.):

ಜಪಾನ್ನಲ್ಲಿ ಅಕ್ಟೋಬರ್ 17ರಿಂದ ನಡೆಯಲಿರುವ ಏಷ್ಯನ್ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿ ರಾಧಾ ವೆಂಕಟೇಶ್ ಅವರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಶುಭ ಹಾರೈಸಿದರು. ರಾಧಾ ಅವರನ್ನು ತಮ್ಮ ನಿವಾಸದಲ್ಲಿ ಆತ್ಮೀಯವಾಗಿ ಸನ್ಮಾನಿಸಿದ ಸಚಿವರು, ಅವರ ಕ್ರೀಡಾ ಸಾಧನೆಯನ್ನು ಶ್ಲಾಘಿಸಿದರು.

ಬಡತನ ಹಾಗೂ ಅಂಗವೈಕಲ್ಯದಂತಹ ಸವಾಲುಗಳನ್ನು ಮೆಟ್ಟಿನಿಂತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ರಾಧಾ ಅವರ ಛಲ ಎಲ್ಲರಿಗೂ ಮಾದರಿ ಎಂದು ಸಂತೋಷ್ ಲಾಡ್ ಹೇಳಿದರು.

“ಏಷ್ಯನ್ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ರಾಧಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಅವರು ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಯಾಗಿರುವುದು ಇಲಾಖೆಗೆ ಮತ್ತಷ್ಟು ಗೌರವ ತಂದಿದೆ.

ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದೇಶ ಹಾಗೂ ರಾಜ್ಯಕ್ಕೆ ಚಿನ್ನದ ಪದಕ ತರಲಿ. ಕಾರ್ಮಿಕ ಇಲಾಖೆಯ ವತಿಯಿಂದ ಅವರಿಗೆ ಅಗತ್ಯವಿರುವ ಎಲ್ಲ ನೆರವು ಮತ್ತು ಸಹಕಾರ ನೀಡಲಾಗುವುದು,” ಎಂದು ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು.

ಸಚಿವರ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದ ರಾಧಾ ವೆಂಕಟೇಶ್, ಸರ್ಕಾರ ಹಾಗೂ ಸಚಿವರಿಂದ ದೊರೆತ ಬೆಂಬಲ ತಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು. ಇಂತಹ ಪ್ರೋತ್ಸಾಹದಿಂದ ಮುಂಬರುವ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ಸಾಹ ಹೆಚ್ಚಾಗಿದೆ ಎಂದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ರಾಧಾ ವೆಂಕಟೇಶ್ ಅವರು T12 ವಿಭಾಗದ ಪ್ಯಾರಾ ಓಟಗಾರ್ತಿಯಾಗಿದ್ದು, 400 ಮೀಟರ್ ಹಾಗೂ 1500 ಮೀಟರ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

2018ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 1500 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು, 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲೂ 1500 ಮೀಟರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande