ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ
ಕೋಲಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಅಲ್ಮಾಜ್ ಪರ್ವೀನ್ ಎಸ್ಸೆಸ್ಸೆಲ್ಸಿ ಮಧ್ಯವಾರ್ಷಿಕ ಪರೀಕ್ಷೆ ಫಲಿತಾಂಶದ ವಿಶ್ಲೇಷಣೆ ಮಾಡಿದರು.


ಕೋಲಾರ, 08 ಅಕ್ಟೋಬರ್ (ಹಿ.ಸ) : ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಇಲಾಖೆ ಎಲ್ಲಾ ಅಗತ್ಯ ನೆರವು ಸಹಕಾರ ನೀಡಲಿದೆ ಮತ್ತು ದಸರಾ ರಜೆ ಮುಗಿದ ಕೂಡಲೇ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಲ್ಲಿ ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದರು.

ಗುರುವಾರ ನಗರದ ಜಿಲ್ಲಾ ಸ್ಕೌಟ್ಸ್ಭವನದಲ್ಲಿ ತಾಲ್ಲೂಕಿನ ಸರ್ಕಾರಿ,ಅನುದಾನಿತ,ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ, ಅರ್ಧವಾರ್ಷಿಕ ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ನಡೆಸಿ ಮಾತನಾಡಿದರು. ಈಗಾಗಲೇ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ತಾಲ್ಲೂಕಿನಲ್ಲೂ ಪ್ರತ್ಯೇಕವಾಗಿ ವಿಷಯವಾರು ಕಾರ್ಯಾಗಾರ ನಡೆಸಿ ಗುಣಮಟ್ಟದ ಮತ್ತು ಶೇ. ೧೦೦ ಫಲಿತಾಂಶ ಸಾಧನೆಗೆ ಕೈಗೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಥಮ ಸಾಧನಾ, ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಹಿಂದುಳಿದಿರುವ ಮಕ್ಕಳ ಕುರಿತು ವಿಶೇಷ ನಿಗಾ ವಹಿಸಿ ಎಂದು ಸಲಹೆ ನೀಡಿದ ಅವರು ಮುಖ್ಯಶಿಕ್ಷಕರದ್ದು ಹೆಚ್ಚಿನ ಜವಾಬ್ದಾರಿಯಿದ್ದು, ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆ ಶಿಕ್ಷಕರ ಕಾರ್ಯವೈಖರಿ ಕುರಿತು ಗಮನಹರಿಸಬೇಕು, ಎಲ್ಲರ ಸಹಕಾರ ಪಡೆದು ಉತ್ತಮ ಫಲಿತಾಂಶಕ್ಕೆ ಮುನ್ನುಡಿ ಬರೆಯಬೇಕು. ಗುಣಾತ್ಮಕ ಫಲಿತಾಂಶ ಇಂದಿನ ಅಗತ್ಯವಾಗಿದೆ, ಯಾವುದೇ ಮಗು ಅನುತ್ತೀರ್ಣವಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ, ಈ ಹಿನ್ನಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಬೇಕು, ಮುಖ್ಯಶಿಕ್ಷಕರು ಸಹಶಿಕ್ಷಕರ ಸಹಕಾರ ಪಡೆಯಬೇಕು, ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತು ನಿಮ್ಮದೇ ಆದ ಚಿಂತನೆ ಕಾರ್ಯಗತಗೊಳಿಸಿ ಎಂದು ಸಲಹೆ ನೀಡಿದರು.

ಪ್ರತಿ ಶಾಲೆಯಲ್ಲಿ ನಿತ್ಯ ಬೆಳಗ್ಗೆ ೯ ರಿಂದ ೧೦ ರವರೆಗೂ ವಿಶೇಷ ತರಗತಿ ನಡೆಸುವುದು ಕಡ್ಡಾಯವಾಗಿದೆ, ಮುಖ್ಯಶಿಕ್ಷಕರ ಅಗತ್ಯ ಕ್ರಮ ಕೈಗೊಳ್ಳಬೇಕು, ಇದು ಒಬ್ಬರು ಮಾಡುವ ಕೆಲಸವಲ್ಲ ಎಲ್ಲಾಶಿಕ್ಷಕರೊಂದಿಗೆ ತಂಡದೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ಜಿಲ್ಲಾ ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಶಿಕ್ಷಕರು ವಿಧ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ದಾಖಲೆ ಇಡಿ, ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿಧ್ಯಾರ್ಥಿಗಳನ್ನು ಮರು ದಾಖಲಿಸಿಕೊಂಡು ಅವರಿಗೆ ವಿಶೇಷ ಗಮನ ನೀಡುವುದು ಅತಿ ಮುಖ್ಯ. ಇಲಾಖೆವತಿಯಿಂದಲೂ ಕಲಿಕಾ ಸಂಪನ್ಮೂಲ ಪುಸ್ತಕಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮಕ್ಕಳ ಮನಸ್ಥಿತಿ ಅರಿತು ಅವರನ್ನು ಕಲಿಕಾ ದಾರಿಗೆ ತರಬೇಕಾದದ್ದು ಶಿಕ್ಷಕರ ಜವಾಬ್ದಾರಿಯಗಿದ್ದು, ಮುಖ್ಯಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಎಂದರು.

ಪೋಷಕರ ಮತ್ತು ತಾಯಂದಿರ ಸಭೆ ಕರೆದು ಮನೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಅಗತ್ಯ ಕ್ರಮವಹಿಸಲು ಮಾರ್ಗದರ್ಶನ ನೀಡಿ, ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆಗೆ ಹೆಚ್ಚು ಗೈರಾಗುವ ಮಕ್ಕಳ ಮನೆಗಳಿಗೆ ಶಿಕ್ಷಕರುಭೇಟಿ ನೀಡಿ, ಅಗತ್ಯವಾದರೆ ಎಸ್ಡಿಎಂಸಿ ಸದಸ್ಯರನ್ನು ಜತೆ ಕರೆದೊಯ್ದು ಅರಿವು ಮೂಡಿಸಿ. ವಿಷಯ ಪರಿವೀಕ್ಷಕ ಸಮೀವುಲ್ಲಾ ಮಾತನಾಡಿ, ಮುಖ್ಯಶಿಕ್ಷಕರಿಗೆ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪ್ರಭಾರ ವಿಷಯ ಪರಿವೀಕ್ಷಕಿ ಶಶಿವಧನ ಮಾತನಾಡಿ, ಕೋಲಾರ ತಾಲ್ಲೂಕು ಈ ಬಾರಿಯ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಲು ಶಿಕ್ಷಕರ ಪರಿಶ್ರಮ,ಮುಖ್ಯಶಿಕ್ಷಕರ ಮಾರ್ಗದರ್ಶನ ಅಗತ್ಯವಿದೆ, ಇಲಾಖೆ ನೀಡುವ ಸಂಪನ್ಮೂಲಗಳನ್ನು ಮಕ್ಕಳಿಗಾಗಿ ಬಳಸಿ. ಸಭೆಯಲ್ಲಿ ಪ್ರಭಾರ ವಿಷಯ ಪರಿವೀಕ್ಷಕರಾದ ಮಾಲೂರಿನ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ರಾಮಕೃಷ್ಣಪ್ಪ, ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಮಕ್ಕಳು ಯಾವುದೇ ಕಾರಣಕ್ಕೂ ಅನುತ್ತೀರ್ಣರಾಗಬಾರದು ಎಂದು ಸರ್ಕಾರದ ಧ್ಯೇಯವಾಗಿದೆ, ಈ ಧ್ಯೇಯವನ್ನು ಕಾರ್ಯಗತಗೊಳಿಸುವ ಹೊಣೆಗಾರಿಕೆ ಮುಖ್ಯಶಿಕ್ಷಕರ ಮೇಲಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಿಸಿ ಎಂದರು.

ಸಭೆಯಲ್ಲಿ ತಾಲ್ಲೂಕು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳಾದ ಇಸಿಒ ರಾಧಾ, ವೆಂಕಟಸ್ವಾಮಿ, ಮುಖ್ಯಶಿಕ್ಷಕರಾದ ಗಾಯತ್ರಿ, ಸಿದ್ದೇಶ್,ಗೋಪಿನಾಥ್, ರಾಧಮ್ಮ,ತಾಹೇರಾನುಸ್ರತ್,ಸುಮಾ,ವೆಂಕಟರಮಣಪ್ಪಸೇರಿದಂತೆ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಶಾಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿ, ಈ ಬಾರಿಯ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿರುವುದಾಗಿ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande