
ನವದೆಹಲಿ, 08 ಅಕ್ಟೋಬರ್ (ಹಿ.ಸ.):
ಭಾರತದಲ್ಲಿ ಪ್ರಸ್ತುತ 55 ಕೋಟಿ ಇರುವ 5ಜಿ ಬಳಕೆದಾರರ ಸಂಖ್ಯೆಯನ್ನು ದ್ವಿಗುಣಗೊಳಿಸಿ, 2030ರ ವೇಳೆಗೆ 100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ನವದೆಹಲಿ ಯಶೋಭೂಮಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2026ರ 10ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ತನ್ನ ದೂರಸಂಪರ್ಕ ಹಾಗೂ ಡಿಜಿಟಲ್ ತಂತ್ರಜ್ಞಾನ ಸಾಮರ್ಥ್ಯಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರಸ್ತುತ 55 ಕೋಟಿ 5ಜಿ ಬಳಕೆದಾರರಿದ್ದು, 2030ರ ವೇಳೆಗೆ ಈ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 2014ರಲ್ಲಿ ದೇಶದ ಬ್ರಾಡ್‌ಬ್ಯಾಂಡ್ ಗ್ರಾಹಕರ ಸಂಖ್ಯೆ 6 ಕೋಟಿಯಷ್ಟಿದ್ದು, ಈಗ 110 ಕೋಟಿಗೂ ಅಧಿಕವಾಗಿದೆ. ದೇಶದಲ್ಲಿ 135 ಕೋಟಿ ಮೊಬೈಲ್ ಗ್ರಾಹಕರಿದ್ದಾರೆ ಎಂದು ಸಿಂಧಿಯಾ ತಿಳಿಸಿದರು.
ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 4ಜಿ ತಂತ್ರಜ್ಞಾನದಲ್ಲಿ ಭಾರತವು ಹಿಂದೆ ಇತ್ತು. 5ಜಿಯಲ್ಲಿ ವಿಶ್ವದೊಂದಿಗೆ ಹೆಜ್ಜೆ ಹಾಕಿದ್ದು, ಇದೀಗ 6ಜಿಯಲ್ಲಿ ಜಗತ್ತಿನ ಮುಂಚೂಣಿಗೆ ಬರಲು ಸಂಕಲ್ಪ ಮಾಡಿದೆ ಎಂದು ಹೇಳಿದರು.
6ಜಿ ಕುರಿತು ಮಾತನಾಡಿದ ಸಿಂಧಿಯಾ, ಭಾರತ 6ಜಿ ಒಕ್ಕೂಟದಲ್ಲಿ 90 ಸಂಸ್ಥೆಗಳು ಭಾಗಿಯಾಗಿವೆ. ದೇಶವು 7,700 ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದು, ಅವುಗಳಲ್ಲಿ 4,400 ಅಂತಾರಾಷ್ಟ್ರೀಯ ಪೇಟೆಂಟ್‌ಗಳಾಗಿವೆ ಎಂದು ತಿಳಿಸಿದರು.
ಅಕ್ಟೋಬರ್ 7 ಭಾರತ ದೇಶದ ಇತಿಹಾಸದಲ್ಲಿ ಮಹತ್ವದ ದಿನವಾಗಿ ಉಳಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ ದೇಶದ ಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವುದು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಸಿಂಧಿಯಾ ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.