ನಾನಾ ಪಾಟೇಕರ್ ನಿಧನಕ್ಕೆ ಚಿತ್ರರಂಗ, ರಾಜಕೀಯ ವಲಯದಿಂದ ಸಂತಾಪದ ಮಹಾಪೂರ
ನವದೆಹಲಿ, 08 ಅಕ್ಟೋಬರ್ (ಹಿ.ಸ.): ಖ್ಯಾತ ಭಾರತೀಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ವಲಯದಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ನಟರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ನಾನಾ ಪಾಟೇಕರ್ ಅವರನ್ನು ಭಾರತೀಯ ಚಿತ್ರರಂಗದ ಅಪರೂಪದ, ನಿರ್ಭೀತ ಹಾಗೂ ಸಂವೇದನಾಶೀಲ ಕಲಾವಿದ ಎಂದು ಸ
स्मृति शेष नाना पाटेकर। फोटो - इंटरनेट मीडिया


ನವದೆಹಲಿ, 08 ಅಕ್ಟೋಬರ್ (ಹಿ.ಸ.):

ಖ್ಯಾತ ಭಾರತೀಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ವಲಯದಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ನಟರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ನಾನಾ ಪಾಟೇಕರ್ ಅವರನ್ನು ಭಾರತೀಯ ಚಿತ್ರರಂಗದ ಅಪರೂಪದ, ನಿರ್ಭೀತ ಹಾಗೂ ಸಂವೇದನಾಶೀಲ ಕಲಾವಿದ ಎಂದು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾನಾ ಪಾಟೇಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾನಾ ಪಾಟೇಕರ್ ಅವರಂತಹ ತೀವ್ರತೆ, ವಿಶಿಷ್ಟತೆ ಹಾಗೂ ಪ್ರಭಾವಶಾಲಿ ಸಾನ್ನಿಧ್ಯ ಹೊಂದಿದ್ದ ನಟರು ವಿರಳ. ಪ್ರತಿಯೊಂದು ಪಾತ್ರದಲ್ಲೂ ಅವರು ಅದ್ಭುತ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದ್ದರು. ಹಲವು ತಲೆಮಾರುಗಳು ನೆನಪಿನಲ್ಲಿ ಉಳಿಸಿಕೊಳ್ಳುವಂತಹ ಪಾತ್ರಗಳನ್ನು ಅವರು ನೀಡಿದ್ದಾರೆ ಎಂದು ಮೋದಿ ಸ್ಮರಿಸಿದ್ದಾರೆ.

ನಿರ್ಭೀತ ಹಾಗೂ ನೇರ ನಿಲುವುಗಳಿಗೂ ಅವರು ಹೆಸರಾಗಿದ್ದರು. ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ನಾನಾ ಪಾಟೇಕರ್ ಅವರ ಕೊಡುಗೆ ಅಪಾರವಾಗಿದ್ದು, ಅವರ ನಿಧನದಿಂದ ತುಂಬಲಾರದ ಕೊರತೆ ಉಂಟಾಗಿದೆ. ಅವರ ಕುಟುಂಬ, ಸ್ನೇಹಿತರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ತಮ್ಮ ಸಂತಾಪಗಳು ಎಂದು ಪ್ರಧಾನಿ ಹೇಳಿದ್ದಾರೆ.

ನಟ ರಿತೇಶ್ ದೇಶಮುಖ್ ಅವರು ನಾನಾ ಪಾಟೇಕರ್ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದು ಹೇಳಿದ್ದಾರೆ. ಅವರು ಬೇರೆಯವರೊಂದಿಗೆ ಹೋಲಿಸಲಾಗದ ಅದ್ವಿತೀಯ ನಟರಾಗಿದ್ದರು. ತಮ್ಮ ವಿಶಿಷ್ಟ ಶೈಲಿ ಮತ್ತು ಅಭಿನಯದ ಮೂಲಕ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಯಾವುದೇ ಪಾತ್ರವನ್ನೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯ ಅವರಲ್ಲಿತ್ತು. ಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಅವರು ನಾಯಕನಾಗಿದ್ದರು. ಸಾಮಾಜಿಕ ಹಾಗೂ ಪರೋಪಕಾರಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದ್ದರು. ಇದು ಒಂದು ಯುಗದ ಅಂತ್ಯ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾನಾ ಪಾಟೇಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾನಾ ಪಾಟೇಕರ್ ಮತ್ತು ತಮ್ಮ ನಡುವೆ ಅತ್ಯಂತ ಆತ್ಮೀಯ ಸಂಬಂಧವಿತ್ತು ಎಂದು ಹೇಳಿರುವ ಅವರು, ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಪ್ರಭಾವಶಾಲಿ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು ಎಂದು ಸ್ಮರಿಸಿದ್ದಾರೆ.

ವಿಶಿಷ್ಟ ಸಂಭಾಷಣೆ ಹೇಳುವ ಶೈಲಿಯ ಮೂಲಕ ಹಲವು ಪಾತ್ರಗಳನ್ನು ಅವರು ಅಮರಗೊಳಿಸಿದ್ದರು. ಅವರ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಗಡ್ಕರಿ ಹೇಳಿದ್ದಾರೆ.

‘ನಾಮ್ ಫೌಂಡೇಶನ್’ ಮೂಲಕ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಜಲ ಸಂರಕ್ಷಣೆ ಹಾಗೂ ಜಲಾನಯನ ಅಭಿವೃದ್ಧಿ ಕ್ಷೇತ್ರದಲ್ಲಿ ನಾನಾ ಪಾಟೇಕರ್ ಮಾಡಿರುವ ಕಾರ್ಯ ಮಹತ್ವದ್ದಾಗಿದೆ. ರೈತರ ಆತ್ಮಹತ್ಯೆಯಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಅವರು ನೀಡಿದ ನೆರವು ಹಲವು ಅಗತ್ಯವಿರುವ ಕುಟುಂಬಗಳಿಗೆ ಆಸರೆಯಾಗಿತ್ತು. ಅವರು ಅತ್ಯುತ್ತಮ ಕಲಾವಿದರಷ್ಟೇ ಅಲ್ಲದೆ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ಸಂವೇದನಾಶೀಲ ವ್ಯಕ್ತಿಯಾಗಿದ್ದರು ಎಂದು ಗಡ್ಕರಿ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಸಚಿವ ಆಶಿಷ್ ಶೇಲಾರ್ ಅವರು ನಾನಾ ಪಾಟೇಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿದ್ದ ಕಲಾವಿದನ ಅಗಲಿಕೆ ಅತ್ಯಂತ ದುಃಖಕರ ಎಂದು ಹೇಳಿದ್ದಾರೆ. ರಂಗಭೂಮಿ, ಚಿತ್ರರಂಗ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ನಾನಾ ಪಾಟೇಕರ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗವು ಸಂವೇದನಾಶೀಲ, ಪ್ರತಿಭಾವಂತ ಹಾಗೂ ಅಪ್ಪಟ ಕಲಾವಿದನನ್ನು ಕಳೆದುಕೊಂಡಿದೆ ಎಂದು ಶೇಲಾರ್ ಹೇಳಿದ್ದಾರೆ.

ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಪಾಟೇಕರ್ ಅವರ ಚಿತ್ರಗಳ ಸಂಭಾಷಣೆಗಳು, ಛಾಯಾಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಅವರನ್ನು ಸ್ಮರಿಸಿದ್ದಾರೆ. ಸಾಮಾನ್ಯ ಜನರ ಭಾವನೆಗಳನ್ನು ಪರದೆಯ ಮೇಲೆ ಜೀವಂತಗೊಳಿಸಿದ ಕಲಾವಿದ ಎಂದು ಹಲವರು ಅವರನ್ನು ನೆನಪಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾನಾ ಪಾಟೇಕರ್ ನಿಧನವನ್ನು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. ಖ್ಯಾತ ನಟ, ಶಕ್ತಿಶಾಲಿ ರಂಗಭೂಮಿ ಕಲಾವಿದ ಹಾಗೂ ಸಂವೇದನಾಶೀಲ ಸಮಾಜ ಸೇವಕರಾಗಿದ್ದ ಪದ್ಮಶ್ರೀ ನಾನಾ ಪಾಟೇಕರ್ ತಮ್ಮ ಅದ್ಭುತ ಅಭಿನಯದ ಮೂಲಕ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು. ಸಾಮಾಜಿಕ ಕಾಳಜಿಯ ಮೂಲಕ ಸಮಾಜದ ಬಗೆಗಿನ ತಮ್ಮ ಬದ್ಧತೆಯನ್ನೂ ಅವರು ತೋರಿಸಿದ್ದರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ನಾನಾ ಪಾಟೇಕರ್ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರರಂಗವು ತನ್ನ ಅತ್ಯಂತ ಪ್ರಭಾವಶಾಲಿ, ನೈಜ ಹಾಗೂ ಅಪೂರ್ವ ಧ್ವನಿಗಳಲ್ಲಿ ಒಂದನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ‘ಪರಿಂಧಾ’, ‘ಕ್ರಾಂತಿವೀರ್’, ‘ಪ್ರಹಾರ್’ ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಅಭಿನಯವನ್ನು ಸ್ಮರಿಸಿದ ಅಧಿಕಾರಿ, ಪ್ರತಿಯೊಂದು ಪಾತ್ರದಲ್ಲೂ ನೈಜತೆಯನ್ನು ಜೀವಂತಗೊಳಿಸಿದ್ದರು ಎಂದು ಹೇಳಿದ್ದಾರೆ.

ಚಿತ್ರರಂಗದ ಹೊರತಾಗಿಯೂ ಅವರ ಸರಳತೆ, ವಿನಯ ಹಾಗೂ ಸಾಮಾಜಿಕ ಕಾರ್ಯಗಳು ಮತ್ತು ಗ್ರಾಮೀಣ ಸಮುದಾಯಗಳ ಬಗ್ಗೆ ಹೊಂದಿದ್ದ ನಿಸ್ವಾರ್ಥ ಕಾಳಜಿ ಅವರ ವ್ಯಕ್ತಿತ್ವದ ಮಹತ್ವವನ್ನು ತೋರಿಸುತ್ತದೆ ಎಂದು ಶುಭೇಂದು ಅಧಿಕಾರಿ ಹೇಳಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ನಾನಾ ಪಾಟೇಕರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಶಕ್ತಿಶಾಲಿ ಅಭಿನಯ ಹಾಗೂ ಪರಿಣಾಮಕಾರಿ ಸಂಭಾಷಣೆಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದರು. ವಿವಿಧ ಪಾತ್ರಗಳಲ್ಲಿ ಅವರ ಜೀವಂತ ಅಭಿನಯ ಹಿಂದಿ ಚಿತ್ರರಂಗವನ್ನು ಶ್ರೀಮಂತಗೊಳಿಸಿತ್ತು. ಅವರ ನಿಧನ ಚಿತ್ರ ಮತ್ತು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಧಾಮಿ ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande