
ಬಳ್ಳಾರಿ, 08 ಅಕ್ಟೋಬರ್ (ಹಿ.ಸ.)
ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ -2026”ವನ್ನು ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ ಯು ಏರ್ಪಡಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮತ್ತು ಸೇವೆ ಸಲ್ಲಿಸಿರುವ ಸಾಧಕರನ್ನು ಸಮ್ಮೇಳನದಲ್ಲಿ ಗೌರವಿಸಿ `ಕರ್ನಾಟಕ ಸಾಧಕ ರತ್ನ-2026' ಪ್ರಶಸ್ತಿ ನೀಡಲಿದೆ.
`ಕರ್ನಾಟಕ ಸಾಧಕ ರತ್ನ' ಪ್ರಶಸ್ತಿಯನ್ನು 8 ವರ್ಷಗಳಿಂದ ನಿರಂತರವಾಗಿ ನೀಡಲಾಗುತ್ತಿದೆ. 2026ರ ಪ್ರಶಸ್ತಿಯು ಈ ಗೌರವ ಪರಂಪರೆಯ ಮುಂದುವರಿದ ಆವೃತ್ತಿಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿಶಿಷ್ಟ ಸಾಧನೆಗೈದಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.
ಸಾಹಿತ್ಯ, ಕನ್ನಡ ಸೇವೆ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ಸಂಗೀತ, ನೃತ್ಯ, ಕೃಷಿ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಸಮಾಜಸೇವೆ, ಮಾಧ್ಯಮ, ರಂಗಭೂಮಿ, ಜಾನಪದ, ಯಕ್ಷಗಾನ, ಪರಿಸರ, ಉದ್ಯಮ, ಯೋಗ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆ, ದೇಶಸೇವೆ, ಮಾಜಿ ಸೈನಿಕರ ಸೇವೆ, ನ್ಯಾಯಾಂಗ ಸೇವೆ, ಪೌರಕಾರ್ಮಿಕ ಸೇವೆ, ವಿಶೇಷ ಚೇತನರ ಸಾಧನೆ ಹಾಗೂ ವಿಶೇಷ ಸಾಧನೆ ಸೇರಿದಂತೆ 25 ಕ್ಷೇತ್ರಗಳಲ್ಲಿ ವಿಶೇಷ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.
ಪ್ರಶಸ್ತಿ ಆಯ್ಕೆಗಾಗಿ ಸೂಕ್ತವಾದ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಅಭ್ಯರ್ಥಿಗಳ ಸಾಧನೆ, ಸೇವೆ, ನಿರಂತರತೆ, ಸಾಮಾಜಿಕ ಪರಿಣಾಮ ಹಾಗೂ ಸಂಬಂಧಿತ ದಾಖಲೆಗಳನ್ನು ಆಧರಿಸಿ ಪರಿಶೀೀಲನೆ ನಡೆಸಿ ಪುರಸ್ಕೃತರನ್ನು ಆಯ್ಕೆ ಮಾಡಲಾಗುವುದು. ಯಾವುದೇ ವೈಯಕ್ತಿಕ ಪ್ರಭಾವ ಅಥವಾ ಶಿಫಾರಸ್ಸಿಗೆ ಅವಕಾಶವಿಲ್ಲ. ದಾಖಲೆ ಆಧಾರಿತ ಸಾಧನೆಗೆ ಆದ್ಯತೆ ನೀಡಲಾಗುವುದು.
ಅರ್ಜಿದಾರರಿಂದ ಅರ್ಜಿ ಶುಲ್ಕ, ನೋಂದಣಿ ಶುಲ್ಕ ಅಥವಾ ದೇಣಿಗೆಯನ್ನು ಸಂಸ್ಥೆಯು ಪಡೆಯುವುದಿಲ್ಲ. ಆಸಕ್ತರು, ಗೂಗಲ್ ಫಾರ್ಮ್ ಮೂಲಕ ತಮ್ಮ ವೈಯಕ್ತಿಕ ವಿವರಗಳು, ಸಾಧನೆ ಮತ್ತು ಸೇವೆಯ ವಿವರ, ಪ್ರಶಸ್ತಿ / ಗೌರವ / ಮಾನ್ಯತೆಗಳ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳನ್ನು 5ನೇ ನವೆಂಬರ್ 2026ರೊಳಗೆ ಸಲ್ಲಿಸಬೇಕು.
ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 2026ರಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.
ಗೂಗಲ್ ಫಾರ್ಮ್: https://forms.gle/oNds3psERCyptzQj9 - ವಿವರಗಳಿಗಾಗಿ, ಬಸವರಾಜ್ ಬಿಸಲಹಳ್ಳಿ, ಗೌರವಾಧ್ಯಕ್ಷರು, ಶ್ರೀ ಮಹಾದೇವ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಸಂಸ್ಥೆ (ರಿ.), ಬಳ್ಳಾರಿ, ಮೊಬೈಲ್ ಸಂಖ್ಯೆ : 90368 51961 / 73377 45561ಗೆ ಕರೆ ಮಾಡಿರಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್