
ರಿಯಾದ್, 08 ಅಕ್ಟೋಬರ್ (ಹಿ.ಸ.):
ಇರಾನ್ ಬೆಂಬಲಿತ ಹೂತಿ ಬಂಡುಕೋರರು ಸೌದಿ ಅರೇಬಿಯಾದ ಎರಡು ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ. 36 ಮಂದಿ ಗಾಯಗೊಂಡಿದ್ದಾರೆ.
ಆಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ. ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಅಕ್ಟೋಬರ್ 6 ಮತ್ತು 7ರಂದು ಆಭಾ ಹಾಗೂ ಕಿಂಗ್ ಖಾಲಿದ್ ವಿಮಾನ ನಿಲ್ದಾಣಗಳ ಮೇಲೆ ಹೂತಿ ದಾಳಿಗಳು ನಡೆದಿವೆ. ಆಭಾ ವಿಮಾನ ನಿಲ್ದಾಣದ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರಲ್ಲಿ ಓರ್ವ ಮೊರೊಕ್ಕೊ ಹಾಗೂ ಮತ್ತೋರ್ವ ಅಲ್ಜೀರಿಯಾದವರು. ಗಾಯಗೊಂಡ 28 ಮಂದಿಯಲ್ಲಿ ಸೌದಿ ನಾಗರಿಕರು ಹಾಗೂ ವಿದೇಶಿ ನಿವಾಸಿಗಳು ಸೇರಿದ್ದಾರೆ. ಬಾಂಗ್ಲಾದೇಶ ಮತ್ತು ಫಿಲಿಪ್ಪೀನ್ಸ್ನ ತಲಾ ಓರ್ವ ನಿವಾಸಿಯೂ ಗಾಯಗೊಂಡಿದ್ದಾರೆ.
ಕಿಂಗ್ ಖಾಲಿದ್ ವಿಮಾನ ನಿಲ್ದಾಣದಲ್ಲಿ ಗಾಯಗೊಂಡ ಎಂಟು ಮಂದಿಯಲ್ಲಿ ಐವರು ಸೌದಿ ನಾಗರಿಕರು, ಈಜಿಪ್ಟ್ನ ಇಬ್ಬರು ನಿವಾಸಿಗಳು ಹಾಗೂ ಪಾಕಿಸ್ತಾನದ ಓರ್ವ ನಿವಾಸಿ ಸೇರಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡೂ ದಾಳಿಗಳಿಂದ ಆಸ್ತಿಪಾಸ್ತಿಗೂ ಹಾನಿಯಾಗಿದ್ದು, ಹಾನಿಯ ಪ್ರಮಾಣದ ಕುರಿತು ಪ್ರಾಧಿಕಾರ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೆ, ಸೌದಿ ಅರೇಬಿಯಾದ ಕೆಲವು ನಗರಗಳ ಮೇಲಿನ ಹೂತಿ ದಾಳಿಗಳಲ್ಲಿ 13 ಮಂದಿ ಗಾಯಗೊಂಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.