ವಾಟರ್ ಮ್ಯಾನ್ಗಳ ವಿರುದ್ಧ ಎಫ್.ಐ.ಆರ್. ; ವಾಟರ್ ಮ್ಯಾನ್ ಬೆಂಬಲಕ್ಕೆ ಹೋದ ಶಿಕ್ಷಕನ ಅಮಾನತ್ತು
ವಾಟರ್ ಮ್ಯಾನ್ಗಳ ವಿರುದ್ಧ ಎಫ್.ಐ.ಆರ್. ; ವಾಟರ್ ಮ್ಯಾನ್ ಬೆಂಬಲಕ್ಕೆ ಹೋದ ಶಿಕ್ಷಕನ ಅಮಾನತ್ತು
ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಕೋಲಾರ ನಗರದ ಆರ್.ಜಿ.ಲೇಟ್ ಬಡಾವಣೆಗೆ ಗುರುವಾರ ಭೇಟಿ ನೀಡಿದರು.


ಕೋಲಾರ, 08 ಅಕ್ಟೋಬರ್ (ಹಿ.ಸ) : ನಗರದ ಪಾಲಸಂದ್ರ ಬಡಾವಣೆ ಮತ್ತು ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಿ ಸುಲಿಗೆ ಮಾಡುತ್ತಿದ್ದ ಕೋಲಾರ ನಗರಸಭೆಯ ಇಬ್ಬರು ಹೊರಗುತ್ತಿಗೆ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಆಪಾದಿತ ನೌಕರರ ಪರವಾಗಿ ವಕಾಲತ್ತು ವಹಿಸಿ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಡ ಹೇರಲು ಮುಂದಾದ ಪ್ರಾಥಮಿಕ ಶಾಲಾ ಶಿಕ್ಷಕ ಮಂಜುನಾಥ್ ರವರನ್ನು ಅಮಾನತ್ತುಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕೋಲಾರ ನಗರಸಭೆ ವ್ಯಾಪ್ತಿಯ ಪಾಲಸಂದ್ರ ಬಡಾವಣೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಮತ್ತು ಶ್ರೀನಾಥ್ ಎಂಬುವವರು, ನೀರು ಪೂರೈಕೆಗೆ ಪ್ರತಿ ತಿಂಗಳು ಪಾಲಸಂದ್ರ ಬಡಾವಣೆ ಮತ್ತು ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಪ್ರತಿ ಮನೆಗೆ ಎರಡು ನೂರು ರೂಪಾಯಿಯಿಂದ ಐದು ನೂರು ರೂಪಾಯಿ ವರೆಗೆ ಹಣ ವಸೂಲಿ ಮಾಡುತ್ತಿದ್ದರು. ಕಳೆದ ಏಳು ವರ್ಷಗಳಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡುತ್ತಿದ್ದರು.

ದಿನದಿಂದ ದಿನಕ್ಕೆ ಅವರ ಪುಂಡಾಟಿಕೆ ಹಾಗೂ ಸುಲಿಗೆಯ ಹಾವಳಿ ಹೆಚ್ಚಾಗಿದ್ದರಿಂದ ಬೇಸತ್ತ ಸ್ಥಳೀಯ ಸಾರ್ವಜನಿಕರು ನೇರವಾಗಿ ಗುರುವಾರ ಆರ್.ಜಿ.ಲೇಔಟ್ ಬಡಾವಣೆಯ ಉದ್ಯಾನವನ ಕಾಮಗಾರಿ ವೀಕ್ಷಣೆ ಮಾಡಲು ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಆ ಸಮಯದಲ್ಲಿ ಸರ್ಕಾರಿ ನಾಮ ನಿರ್ದೇಶಿತ ಮಾಜಿ ನಗರಸಭಾ ಸದಸ್ಯ ರಾಮಯ್ಯ ಇಬ್ಬರು ನೌಕರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದ್ದರು. ಆ ನಂತರ ಜಿಲ್ಲಾಧಿಕಾರಿಗಳು ಲಿಖಿತವಾಗಿ ದೂರು ನೀಡುವಂತೆ ಸೂಚಿಸಿದರು. ರಾಮಯ್ಯ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಹೊಸದಾಗಿ ಮನೆ ನಿರ್ಮಿಸಿದ್ದ ಮಾಲೀಕರು ಗೃಹ ಪ್ರವೇಶ ದಿನದಂದು ನೀರಿನ ಸಂಪರ್ಕ ಪಡೆದಿದ್ದರು. ತಮ್ಮನ್ನು ಸಂಪರ್ಕಿಸಿಲ್ಲ ಮತ್ತು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯಲಾಗಿದೆ ಎಂದು ಮುಗಿಬಿದ್ದ ಪೌರಸೇವಾ ಹೊರಗುತ್ತಿಗೆ ನೌಕರರಾದ ರಮೇಶ್ ಬಾಬು ಮತ್ತು ಶ್ರೀನಾಥ್ ನಗರಸಭೆಗೆ ದೂರು ನೀಡಿ ಸಂಪರ್ಕ ಕಡಿತಗೊಳಿಸಿದ್ದರು. ಅಲ್ಲದೆ ಮನೆ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ನೀಡಿ ನೀರು ಪೂರೈಕೆ ಸಂಪರ್ಕಕ್ಕಾಗಿ ಹತ್ತು ಸಾವಿರ ರೂಪಾಯಿ ಅಕ್ರಮವಾಗಿ ಹಣ ಪಡೆದಿರುವುದಾಗಿ ಆರೋಪಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗುತ್ತದೆ. ಆನಂತರ ಪೈಪ್ ಲೈನ್ ಹಾಕಬೇಕಾದರೆ ರಸ್ತೆಯನ್ನು ಅಗೆಯಬೇಕಾಗುತ್ತದೆ ಎಂದು ಮುಂದಾಲೋಚನೆಯಿAದ ಪೈಪ್ ಲೈನ್ ಹಾಕಲಾಗಿತ್ತು. ಆದರೆ ರಮೇಶ್ ಬಾಬು ಮತ್ತು ಶ್ರೀನಾಥ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರಿಬ್ಬರು ಹೊರಗುತ್ತಿಗೆ ನೌಕರರಾಗಿದ್ದು, ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಅಧಿಕಾರವಿಲ್ಲದಿದ್ದರೂ ದಂದಾಲೆ ನಡೆಸಿದರೆಂದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಹ ಇಂದು ದೂರು ನೀಡಲಾಯಿತು.

ಪಾಲಸಂದ್ರA ಬಡಾವಣೆ ಮತ್ತು ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಅಕ್ರಮವಾಗಿ ಇನ್ನೂರು ರೂಪಾಯಿಯಿಂದ ಐದೂ ನೂರು ರೂಪಾಯಿ ವರೆಗೆ ನೀರು ಪೂರೈಕೆಗಾಗಿ ಸುಲಿಗೆ ಮಾಡಲಾಗುತ್ತಿದೆ. ಈ ಎರಡೂ ಬಡಾವಣೆಗಳಲ್ಲಿ ಸರ್ಕಾರಿ ನೌಕರರು, ನ್ಯಾಯವಾದಿಗಳು ವಾಸ ಮಾಡುತ್ತಿದ್ದಾರೆ. ಯಾವುದೇ ಮುಲಾಜಿಲ್ಲದೆ ಎಲ್ಲರಿಂದ ನಿರಂತರವಾಗಿ ಪ್ರತಿ ತಿಂಗಳು ವಸೂಲಿ ಮಾಡಲಾಗುತ್ತಿತ್ತು. ಹೊರ ಗುತ್ತಿಗೆ ತಮ್ಮದೇ ಗ್ಯಾಂಗ್ ನಿರ್ಮಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಭವನದ ಹಿಂದೆ ಇರುವ ಬಿ.ಎಸ್.ಎನ್.ಎಲ್. ನಿವಾಸಿಗಳಿಗೆ ನೀರು ಪೂರೈಕೆ ಮಾಡಲು ಪ್ರತಿ ಮನೆಯಿಂದ ಐದು ನೂರು ರೂಪಾಯಿ ಪ್ರತಿ ತಿಂಗಳು ಅಕ್ರಮವಾಗಿ ವಸೂಲಿ ಮಾಡಲಾಗತ್ತದೆ. ನಿಮ್ಮದು ಅನಧಿಕೃತ ಬಡಾವಣೆ ನಗರಸಭೆಗೆ ಸೇರಿಲ್ಲ ಎಂದು ಬಡಾವಣೆಯ ನಿವಾಸಿಗಳನ್ನು ಹೆದರಿಸಿ ನಿವಾಸಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ.

ಆರ್.ಜಿ. ಲೇಔಟ್ ಬಡಾವಣೆಯಲ್ಲಿರುವ ವಕೀಲರೊಬ್ಬರ ಮನೆಯ ಸಂಪರ್ಕದ ಪೈಪ್ಲೈನ್ ಮೂರು ತಿಂಗಳಾದರೂ ಸಹ ದುರಸ್ತಿ ಮಾಡಲಿಲ್ಲ. ಅವರು ಟ್ಯಾಂಕರ್ ಮೂಲಕ ನೀರು ಖರೀದಿ ಮಾಡುತ್ತಿದ್ದರು. ಪಾಲಸಂದ್ರ ಬಡಾವಣೆಯ ಹಿಂದಿನ ನಗರಸಭಾ ಸದಸ್ಯರಿಗೆ ಆಪ್ತರಾಗಿರುವ ಶಿಕ್ಷಕರೊಬ್ಬರು ನೀವು ನಗರಸಭಾ ಸದಸ್ಯರನ್ನು ಸಂಪರ್ಕ ಮಾಡಿ ಆ ನಂತರ ದುರಸ್ತಿ ಮಾಡಲಾಗುವುದೆಂದು ಹೇಳಿದರಂತೆ ಈ ಹಿಂದೆ ಸಹ ಅಂಬೇಡ್ಕರ್ ಭವನದ ಸಮೀಪ ಇರುವ ಕೊಳವೆ ಬಾವಿಯಿಂದ ಗಂಗಮ್ಮಪಾಳ್ಯ ಮತ್ತು ಆರ್.ಜಿ.ಲೇಔಟ್ ಬಡಾವಣೆಗೆ ನೀರು ಸಂಪರ್ಕ ಕಲ್ಪಿಸಲಾಗಿತ್ತು. ಬಡಾವಣೆಯ ನಿವಾಸಿಗಳೇ ಹಣ ಹಾಕಿ ಪೈಪ್ ಲೈನ್ ದುರಸ್ತಿ ಮಾಡಿದ್ದರು.

ನಗರಸಭೆಗೆ ಚುನಾವಣೆ ನಡೆದು ಪಾಲಸಂದ್ರA ವಾರ್ಡಿಗೆ ನಗರಸಭಾ ಸದಸ್ಯರು ಆಯ್ಕೆಯಾದ ನಂತರ ಅವರ ಸುತ್ತಮುತ್ತ ಒಂದು ಮಾಫೀಯಾ ಆರಂಭವಾಯಿತು. ಇಡೀ ನೀರು ಪೂರೈಕೆ ಮತ್ತು ಪೈಪ್ಲೈನ್ ದುರಸ್ತಿಯನ್ನು ಮಾಫಿಯಾ ನಿರ್ವಹಣೆ ಮಾಡುತ್ತಿತ್ತು. ಹೊರಗುತ್ತಿಗೆ ನೌಕರರು ಬಡಾವಣೆ ತಮ್ಮ ಸ್ವಂತ ಆಸ್ತಿ ಎಂಬAತೆ ವರ್ತನೆ ಮಾಡುತ್ತಿದ್ದರು.

ಆರ್.ಜಿ. ಲೇಔಟ್ ಬಡಾವಣೆ ವೀಕ್ಷಣೆಗೆ ಬಂದ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಬಡಾವಣೆಯ ನಿವಾಸಿಗಳು ಇಬ್ಬರು ಹೊರಗುತ್ತಿಗೆ ನೌಕರರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜನರ ರಕ್ತ ಹೀರುತ್ತಿದ್ದಾರೆ. ಪ್ರಶ್ನೆ ಮಾಡಿದರೆ ದೌರ್ಜನ್ಯ ಮಾಡುತ್ತಾರೆ ಎಂದು ಆರೋಪಿಸಿದರು. ಹೊರಗುತ್ತಿಗೆ ನೌರರ ವಿರುದ್ಧ ಮಾತನಾಡಿದ ವಕೀಲ ರವೀಂದ್ರ ಮತ್ತು ಶಿಕ್ಷಕ ಮಂಜುನಾಥ್ ನಡುವೆ ಈ ವಿಷಯದಲ್ಲಿ ಮಾತಿನ ಚಕಮಕಿ ನಡೆದಿದೆ.

ಹೊರ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ರವರನ್ನು ಶಿಕ್ಷಕ ಮಂಜುನಾಥ್ ಮತ್ತು ಇತರರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಭೇಟಿಯಾಗಿದ್ದರು. ಅವರಿಬ್ಬರು ಅಮಾಯಕರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿದರು. ಹಾಗಾದರೆ ಲಿಖಿತವಾಗಿ ನಿಮ್ಮ ವಿಳಾಸ, ಗುರುತಿನ ಚೀಟಿಯೊಂದಿಗೆ ಮನವಿ ಬರೆದುಕೊಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರಂತೆ ಆ ಪೈಕಿ ಮಂಜುನಾಥ್ ಶಿಕ್ಷಕರಾಗಿದ್ದು, ಸರ್ಕಾರಿ ನೌಕರರಾಗಿದ್ದಾರೆ. ಇದರಿಂದ ಕೆರಳಿದ ಜಿಲ್ಲಾಧಿಕಾರಿಗಳು ವಾಟರ್ ಮ್ಯಾನ್ಗಳನ್ನು ರಕ್ಷಣೆ ಮಾಡಲು ನೀವು ಗ್ಯಾಂಗ್ಸ್ಟರ್ ರೀತಿಯಲ್ಲಿ ವರ್ತಿಸುತ್ತಿದ್ದೀರಿ ನಿಮ್ಮನ್ನು ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರಂತೆ ಅಲ್ಲದೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ. ಹಲವು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯವಿರಲಿಲ್ಲ. ಆದರೆ ಜಿಲ್ಲಾಧಿಕರಿಗಳು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿವುದನ್ನು ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ.

ಹೊರಗುತ್ತಿಗೆ ನೌಕರರಾದ ರಮೇಶ್ ಮತ್ತು ಶ್ರೀನಾಥ್ ಸಾರ್ವಜನಿಕರಿಂದ ನೀರು ಪೂರೈಕೆಗೆ ಅಕ್ರಮವಾಗಿ ಹಣ ವಸೂಲಿ ಮಾಡುವ ದೂರುಗಳು ಬಂದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರವಾದ ವರದಿ ಸಲ್ಲಿಸಲಾಗುವುದು. ಅವರ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ ನಗರಸಭೆಯ ಆಯುಕ್ತ ವೆಂಕಟೇಶ್ ನಾಗನೂರು ತಿಳಿಸಿದ್ದಾರೆ.

ಆರ್.ಜೆ. ಲೇಔಟ್ ಬಡಾವಣೆಯಲ್ಲಿ ಉದ್ಯಾನವನ ಕಾಮಗಾರಿ ಸ್ಥತಿಗಗೊಂಡಿದೆ. ಇಪ್ಪತ್ತು ದಿನಗಳ ಹಿಂದೆ ಕಾಮಗಾರಿ ಆರಂಭವಾಯಿತು. ಆನಂತರ ದಿಡೀರನೇ ಸ್ಥಗಿತಗೊಂಡಿತ್ತು. ಉದ್ಯಾನವನ ಕಾಮಗಾರಿ ನಿಂತು ಹೋಗಿದ್ದು, ವೀಕ್ಷಣೆ ಮಾಡಿ ಕ್ರಮಕೈಗೊಲ್ಳಬೇಕೇಂದು ಆರ್.ಜಿ.ಲೇಔಟ್ ಬಡಾವಣೆಯ ನಿವಾಸಿ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಭೇಟಿಯ ಸಮಯದಲ್ಲಿ ಬಡಾವಣೆಯ ನಿವಾಸಿಗಳ ಅಸಹನೆ ಸ್ಪೋಟಗೊಂಡಿತ್ತು. ಅಂತಿಮವಾಗಿ ಹೊರಗುತ್ತಿಗೆ ನೌಕರರ ಸುಲಿಗೆಯನ್ನು ನಿವಾಸಿಗಳು ಬಯಲು ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande