
ನವದೆಹಲಿ, 08 ಅಕ್ಟೋಬರ್ (ಹಿ.ಸ.):
ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಸಮಾವೇಶಿತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದೇಶಾದ್ಯಂತ ಶಾಲೆಗಳಲ್ಲಿ 30 ನಿಮಿಷಗಳ ‘ಸಂವೇದನಾಶೀಲತೆ ಮತ್ತು ಮಾರ್ಗದರ್ಶನ ಘಟಕ’ದ ರಾಷ್ಟ್ರವ್ಯಾಪಿ ಪ್ರದರ್ಶನ ನಡೆಸಿದೆ. ಈ ಅಭಿಯಾನದಲ್ಲಿ ದೇಶದ 60 ಸಾವಿರಕ್ಕೂ ಅಧಿಕ ಶಾಲೆಗಳು ಭಾಗವಹಿಸಿವೆ.
ಶಾಲೆಗಳಲ್ಲಿ ಸಮಾವೇಶಿತ ಶಿಕ್ಷಣಕ್ಕಾಗಿ ‘ಸಮಗ್ರ ಶಾಲಾ ದೃಷ್ಟಿಕೋನ’ವನ್ನು ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವಿಶೇಷ ಅಗತ್ಯವುಳ್ಳ ಮಕ್ಕಳ ಅಗತ್ಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಂಡು, ಅವರಿಗೆ ಸುರಕ್ಷಿತ, ಸುಗಮ ಹಾಗೂ ಸಹಕಾರಯುತ ವಾತಾವರಣ ಕಲ್ಪಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವಂತೆ ಮಾಡುವುದು ಇದರ ಆಶಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಾಯೋಗಿಕ ಉದಾಹರಣೆಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳೊಂದಿಗೆ ಸೂಕ್ತ ಹಾಗೂ ಸಂವೇದನಾಶೀಲವಾಗಿ ನಡೆದುಕೊಳ್ಳುವ ಕುರಿತು ಶಾಲಾ ಸಿಬ್ಬಂದಿಗೆ ಅರಿವು ಮೂಡಿಸಲಾಗಿದೆ. ಈ ಘಟಕವು 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಶಾಲಾ ಮುಖ್ಯಸ್ಥರು, ಶಿಕ್ಷಕರು, ವಿಶೇಷ ಶಿಕ್ಷಕರ ಜತೆಗೆ ಆಯಾ, ಚಾಲಕರು, ಗುಮಾಸ್ತರು, ಸ್ವಾಗತ ಸಿಬ್ಬಂದಿ, ಡೀನ್ ಹಾಗೂ ವಾರ್ಡನ್‌ಗಳಂತಹ ಬೋಧಕೇತರ ಸಿಬ್ಬಂದಿಯನ್ನೂ ಒಳಗೊಂಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳೆದ ಮೂರು ತಿಂಗಳಿನಿಂದ ಪ್ರಶಸ್ತ್ ಮೂಲಕ ಸಾಮಾನ್ಯ ಶಿಕ್ಷಕರಿಗೆ ಸಮಾವೇಶಿತ ಶಿಕ್ಷಣದ ಕುರಿತು ಸಂವೇದನಾಶೀಲತೆ ಮೂಡಿಸುವ ಅಭಿಯಾನ ನಡೆಸುತ್ತಿದೆ. ಈವರೆಗೆ 72 ಲಕ್ಷಕ್ಕೂ ಅಧಿಕ ಶಿಕ್ಷಕರನ್ನು ಸಂವೇದನಾಶೀಲಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಶಸ್ತ್ ಶಾಲಾ ಆಧಾರಿತ ಡಿಜಿಟಲ್ ಸಾಧನವಾಗಿದ್ದು, 2016ರ ಅಂಗವಿಕಲರ ಹಕ್ಕುಗಳ ಕಾಯ್ದೆಯ ವ್ಯಾಪ್ತಿಗೆ ಬರುವ ಸಂಭವನೀಯ ಅಂಗವೈಕಲ್ಯ ಸ್ಥಿತಿಗಳಿರುವ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಬಳಸಲಾಗುತ್ತದೆ. ಇದರ ಎರಡು ಭಾಗಗಳ ಪರಿಶೀಲನಾ ಪಟ್ಟಿಯ ಮೂಲಕ ಶಿಕ್ಷಕರು ಮಕ್ಕಳಲ್ಲಿ ಕಂಡುಬರುವ ಸೂಚಕಗಳ ಆಧಾರದ ಮೇಲೆ ತಪಾಸಣೆ ನಡೆಸುತ್ತಾರೆ. ಬಳಿಕ ವಿಶೇಷ ಶಿಕ್ಷಕರು ಪ್ರಕರಣಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಶಿಫಾರಸು ಮಾಡುವ ವ್ಯವಸ್ಥೆಯೂ ಇದೆ.
ಸಮಾವೇಶಿತ ಶಿಕ್ಷಣವು ತರಗತಿಗೆ ಮಾತ್ರ ಸೀಮಿತವಾದ ಜವಾಬ್ದಾರಿಯಲ್ಲ. ಅದು ಇಡೀ ಶಾಲೆಯ ಸಾಮೂಹಿಕ ಜವಾಬ್ದಾರಿಯಾಗಿದೆ. ತರಗತಿ, ಕಚೇರಿ, ಸಾರಿಗೆ ವ್ಯವಸ್ಥೆ ಹಾಗೂ ಶಾಲೆಯ ಇತರ ಸಾಮಾನ್ಯ ಸ್ಥಳಗಳಲ್ಲಿ ಮಗುವಿನೊಂದಿಗೆ ನಡೆಯುವ ಪ್ರತಿಯೊಂದು ಸಂವಹನವೂ ಅದರ ಸಮಾವೇಶದ ಅನುಭವದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವಾಲಯ ಹೇಳಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಅಂಗವಿಕಲರ ಹಕ್ಕುಗಳ ಕಾಯ್ದೆ-2016ಕ್ಕೆ ಅನುಗುಣವಾಗಿ ದೇಶದಲ್ಲಿ ಸಮಾನ, ಸುಲಭವಾಗಿ ಲಭ್ಯವಾಗುವ ಹಾಗೂ ಸಮಾವೇಶಿತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಶಿಕ್ಷಣ ಸಚಿವಾಲಯದ ನಿರಂತರ ಪ್ರಯತ್ನಗಳ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.