
ಹಾಸನ, 08 ಅಕ್ಟೋಬರ್ (ಹಿ.ಸ.):
ಹಾಸನ ಜಿಲ್ಲೆಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ‘ರೈತ ಸ್ವಾಭಿಮಾನ ಯಾತ್ರೆ’ ಸಹಸ್ರಾರು ರೈತರ ಸಮ್ಮುಖದಲ್ಲಿ ನಡೆಯಿತು.
ಚನ್ನರಾಯಪಟ್ಟಣದ ಎಪಿಎಂಸಿ ಆವರಣದಲ್ಲಿ ಸೇರಿದ್ದ ರೈತರನ್ನು ಉದ್ದೇಶಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕಾದ ಸರ್ಕಾರ ತನ್ನ ರೈತ ವಿರೋಧಿ ಧೋರಣೆಯಿಂದ ರೈತರ ಕಣ್ಣಲ್ಲಿ ನೀರು ಹಾಕಿಸುತ್ತಿದೆ ಎಂದು ಆರೋಪಿಸಿದರು. ಆದಷ್ಟು ಬೇಗ ಸರ್ಕಾರ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಲು ಸರ್ಕಾರಕ್ಕೆ ತಾಯಿ ಹೃದಯ ಬೇಕು. ಇಂದಿನ ಸರ್ಕಾರಕ್ಕೆ ತಾಯಿ ಹೃದಯ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ದಿನ ಬೆಳಗಾದರೆ ಸಾಲದಿಂದ ರೈತರು ಕಂಗಾಲಾಗುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸಿ, ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಹಾಸನ ಜಿಲ್ಲೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ರೈತ ಸ್ವಾಭಿಮಾನ ಯಾತ್ರೆಗೆ ಬೆಂಬಲ ನೀಡಿ ಯಶಸ್ವಿಗೊಳಿಸಲು ಶ್ರಮಿಸಿದ ರೈತರು, ನಾಯಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು, ಶಾಸಕ ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಎಚ್.ಟಿ. ಮಂಜುನಾಥ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜಿಲ್ಲಾಧ್ಯಕ್ಷ ನಟರಾಜ್, ತಾಲೂಕು ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಅಶೋಕ್, ಶೇಖರಪ್ಪ, ಪ್ರವೀಣ್, ಶಿವಣ್ಣ, ಶಿವರಾಜಣ್ಣ, ಪುಟ್ಟಸ್ವಾಮಿ, ರಮೇಶ್, ಜಗದೀಶ್, ಮಂಜಣ್ಣ, ಪರಮೇಶ್ವರ, ಚಂದ್ರಣ್ಣ, ಮಹದೇವ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಹಾಗೂ ಚನ್ನರಾಯಪಟ್ಟಣದ ಜನರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.