ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು
ರಷ್ಯಾದ ಸೋಚಿ ಸಮೀಪ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಟ್ಯಾಂಕರ್ನಲ್ಲಿದ್ದ 23 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
russia-sochi-drone-attack-oil-tanker-23-indian-crew-members-rescued


ಮಾಸ್ಕೋ, 07 ಅಕ್ಟೋಬರ್ (ಹಿ.ಸ.):

ರಷ್ಯಾದ ಕಪ್ಪು ಸಮುದ್ರ ಕರಾವಳಿಯಲ್ಲಿರುವ ಸೋಚಿ ಸಮೀಪ ತೈಲ ಟ್ಯಾಂಕರ್ವೊಂದರ ಮೇಲೆ ಡ್ರೋನ್ ದಾಳಿ ನಡೆದಿದ್ದು, ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ಲೈಬೀರಿಯಾ ಧ್ವಜ ಹೊಂದಿರುವ ತೈಲ ಟ್ಯಾಂಕರ್ನಲ್ಲಿ 23 ಭಾರತೀಯ ಸಿಬ್ಬಂದಿ ಇದ್ದರು. ದಾಳಿಯ ಬಳಿಕ ಎಲ್ಲ ಸಿಬ್ಬಂದಿಯನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ರಷ್ಯಾ ಅಧಿಕಾರಿಗಳ ಪ್ರಕಾರ, ಟ್ಯಾಂಕರ್ ಮೇಲೆ ಮಾನವರಹಿತ ನೌಕೆಯಿಂದ ದಾಳಿ ನಡೆದಿದ್ದು, ಬಳಿಕ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಟ್ಯಾಂಕರ್ನಲ್ಲಿದ್ದ ಕಚ್ಚಾ ತೈಲಕ್ಕೂ ಬೆಂಕಿ ತಗುಲಿದ್ದು, ದಟ್ಟ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಏರಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಆರಂಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಹಡಗಿನ ಸಮೀಪ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ.

ಬೆಂಕಿಯ ತೀವ್ರತೆ ಕಡಿಮೆಯಾದ ಬಳಿಕ ಮತ್ತೆ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಭಾರತೀಯ ಸಿಬ್ಬಂದಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.

ದಾಳಿಯ ಹಿನ್ನೆಲೆಯಲ್ಲಿ ಸೋಚಿ ಕರಾವಳಿ ಮತ್ತು ಕೆಲವು ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.

ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂಬುದನ್ನು ರಷ್ಯಾ ಆರೋಪಿಸಿದೆಯಾದರೂ, ತಕ್ಷಣಕ್ಕೆ ಇದಕ್ಕೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.

ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಭಾರತ ಕಳವಳ:

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಂಘರ್ಷಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಪುನರುಚ್ಚರಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ಬಿಡುಗಡೆ ಮಾಡಿದ್ದು, “ವಾಣಿಜ್ಯ ಹಡಗುಗಳ ಮೇಲಿನ ಇಂತಹ ದಾಳಿಗಳು ಜಾಗತಿಕ ವಾಣಿಜ್ಯ ಮತ್ತು ವಿಶ್ವದ ಜನರ ಸುರಕ್ಷತೆ ಹಾಗೂ ಕಲ್ಯಾಣಕ್ಕೆ ಗಂಭೀರ ಪರಿಣಾಮ ಬೀರುತ್ತವೆ.” ಹಡಗುಗಳು ಮತ್ತು ನಾವಿಕರ ಸುರಕ್ಷತೆಗಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಕೈಗೊಂಡಿರುವ ಪ್ರಯತ್ನಗಳನ್ನೂ ಸಚಿವಾಲಯ ಉಲ್ಲೇಖಿಸಿದೆ.

ಮತ್ತೊಂದು ಹಡಗು ದುರಂತಇದಕ್ಕೂ ಒಂದು ದಿನ ಮೊದಲು ರೊಮೇನಿಯಾ ಸಮೀಪ ಕಪ್ಪು ಸಮುದ್ರದಲ್ಲಿ ಟರ್ಕಿ ಮಾಲೀಕತ್ವದ ‘ಎಂವಿ ರೊಯಾದ್ ಮಮ್ಮಡೋವ್’ ಸರಕು ಹಡಗಿಗೆ ಬೆಂಕಿ ಹೊತ್ತಿಕೊಂಡು ಅದು ಮುಳುಗಿತ್ತು.

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 11 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಹಡಗಿನಲ್ಲಿದ್ದ ಮೂವರು ಭಾರತೀಯರಲ್ಲಿ ಓರ್ವ ಗಾಯಗೊಂಡಿದ್ದು, ರೊಮೇನಿಯಾ ಅಧಿಕಾರಿಗಳು ಅವರಿಗೆ ಚಿಕಿತ್ಸೆ ಒದಗಿಸಿದ್ದಾರೆ.

ಈ ನಡುವೆ ಬಲ್ಗೇರಿಯಾ ಸಮೀಪವೂ ಎರಡು ವಾಣಿಜ್ಯ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಹೀಗಾಗಿ ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಆತಂಕ ಮತ್ತಷ್ಟು ಹೆಚ್ಚಾಗಿದೆ.

2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಪ್ಪು ಸಮುದ್ರದಲ್ಲಿ ವಾಣಿಜ್ಯ ಸಾಗಣೆಗೆ ಅಪಾಯ ಹೆಚ್ಚಾಗಿದೆ.

ಎರಡೂ ದೇಶಗಳು ಮೂಲಸೌಕರ್ಯ ಹಾಗೂ ಸೇನಾ ಸಂಬಂಧಿತ ತಾಣಗಳನ್ನು ಗುರಿಯಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಘರ್ಷದ ಪರಿಣಾಮ ವಾಣಿಜ್ಯ ಹಡಗುಗಳ ಮೇಲೂ ಬೀರುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande