ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 10ನೇ ಆವೃತ್ತಿ ಆರಂಭ; 6ಜಿ, ಕೃತಕ ಬುದ್ಧಿಮತ್ತೆಗೆ ಆದ್ಯತೆ
ನವದೆಹಲಿ, 07 ಅಕ್ಟೋಬರ್ (ಹಿ.ಸ.): ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 10ನೇ ಆವೃತ್ತಿ ಬುಧವಾರ ನವದೆಹಲಿಯ ಯಶೋಭೂಮಿ ಸಮಾವೇಶ ಕೇಂದ್ರದಲ್ಲಿ ಆರಂಭಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಅ.10ರವರೆಗೆ ನಡೆಯಲಿರುವ ಸಮಾವೇಶದಲ್ಲಿ 6ಜಿ, ಕೃತಕ
इंडिया मोबाइल कांग्रेस (आईएमसी)


ನವದೆಹಲಿ, 07 ಅಕ್ಟೋಬರ್ (ಹಿ.ಸ.):

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 10ನೇ ಆವೃತ್ತಿ ಬುಧವಾರ ನವದೆಹಲಿಯ ಯಶೋಭೂಮಿ ಸಮಾವೇಶ ಕೇಂದ್ರದಲ್ಲಿ ಆರಂಭಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಅ.10ರವರೆಗೆ ನಡೆಯಲಿರುವ ಸಮಾವೇಶದಲ್ಲಿ 6ಜಿ, ಕೃತಕ ಬುದ್ಧಿಮತ್ತೆ, ಉಪಗ್ರಹ ಸಂವಹನ, ಸೈಬರ್ ಭದ್ರತೆ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಹೊಸ ಪ್ರಯೋಗಗಳು ಮತ್ತು ನಾವೀನ್ಯತೆಗಳ ಕುರಿತು ಚರ್ಚೆ ನಡೆಯಲಿದೆ.

ಈ ವರ್ಷದ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಧ್ಯೇಯವಾಕ್ಯ ‘ಗಡಿಗಳಿಲ್ಲದೆ ವಿಸ್ತರಣೆ’ ಎಂಬುದಾಗಿದೆ. 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1.50 ಲಕ್ಷಕ್ಕೂ ಅಧಿಕ ಭಾಗವಹಿಸುವವರು, 300ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ ಪಾಲುದಾರರು ಮತ್ತು ಸುಮಾರು 500 ನವೋದ್ಯಮಗಳು ಸಮಾವೇಶದಲ್ಲಿ ಭಾಗವಹಿಸುತ್ತಿವೆ. 400ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳು ಹಾಗೂ ತಾಂತ್ರಿಕ ನಾವೀನ್ಯತೆಗಳನ್ನು ಪ್ರದರ್ಶಿಸಲಿವೆ. ದೂರಸಂಪರ್ಕ ಇಲಾಖೆ ಮತ್ತು ಭಾರತೀಯ ಸೆಲ್ಯುಲರ್ ಕಾರ್ಯಾಚರಣೆದಾರರ ಸಂಘ ಜಂಟಿಯಾಗಿ ಸಮಾವೇಶ ಆಯೋಜಿಸಿವೆ.

ನಾಲ್ಕು ಪ್ರಮುಖ ಸ್ತಂಭ

ಇಂಡಿಯಾ ಮೊಬೈಲ್ ಕಾಂಗ್ರೆಸ್-2026ರಲ್ಲಿ ಸೃಷ್ಟಿ, ವರ್ಧನೆ, ಸಬಲೀಕರಣ ಮತ್ತು ಭದ್ರತೆ ಎಂಬ ನಾಲ್ಕು ಪ್ರಮುಖ ಸ್ತಂಭಗಳನ್ನು ರೂಪಿಸಲಾಗಿದೆ.

‘ಸೃಷ್ಟಿ’ ಅಡಿಯಲ್ಲಿ 6ಜಿ, ಕೃತಕ ಬುದ್ಧಿಮತ್ತೆ ಆಧಾರಿತ ದೂರಸಂಪರ್ಕ ಜಾಲ, ಅಂಚು ಮತ್ತು ಮೇಘ ಗಣಕಯಂತ್ರ, ಕ್ವಾಂಟಮ್ ಸಂವಹನ ಹಾಗೂ ಅರೆವಾಹಕಗಳಂತಹ ಮುಂದಿನ ಪೀಳಿಗೆಯ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗುತ್ತಿದೆ.

‘ವರ್ಧನೆ’ ಅಡಿಯಲ್ಲಿ 5ಜಿ ತಂತ್ರಜ್ಞಾನದ ವಾಣಿಜ್ಯ ಬಳಕೆ, ಉಪಗ್ರಹ ಸಂವಹನ, ಸಾಧನದಿಂದ ನೇರ ಸಂಪರ್ಕ, ದೂರಸಂಪರ್ಕ ಉತ್ಪಾದನೆ ಹಾಗೂ ರೋಬೋಟಿಕ್ಸ್ ಕುರಿತು ಚರ್ಚೆ ನಡೆಯಲಿದೆ.

‘ಸಬಲೀಕರಣ’ ಸ್ತಂಭದಲ್ಲಿ ಡಿಜಿಟಲ್ ಮೂಲಸೌಕರ್ಯದ ಸುಸ್ಥಿರ ವಿಸ್ತರಣೆ, ಹಸಿರು ದೂರಸಂಪರ್ಕ, ಇಂಧನ ದಕ್ಷತೆ ಹಾಗೂ ವಿದ್ಯುನ್ಮಾನ ತ್ಯಾಜ್ಯ ನಿರ್ವಹಣೆಯಂತಹ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

‘ಭದ್ರತೆ’ ಅಡಿಯಲ್ಲಿ ಸೈಬರ್ ಭದ್ರತೆ, ಡಿಜಿಟಲ್ ವಿಶ್ವಾಸ, ದತ್ತಾಂಶ ಗೌಪ್ಯತೆ, ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ, ಅನಗತ್ಯ ಸಂದೇಶಗಳು ಹಾಗೂ ಸೈಬರ್ ವಂಚನೆ ತಡೆ ಮತ್ತು ಸಮುದ್ರದಾಳದಲ್ಲಿ ಅಳವಡಿಸಿರುವ ಅಂತರ್ಜಾಲ ಕೇಬಲ್‌ಗಳ ರಕ್ಷಣೆಯ ಕುರಿತು ಚರ್ಚೆ ನಡೆಯಲಿದೆ.

ಜಾಗತಿಕ ಸಮಾನ ನಿಯಮಗಳಿಗೆ ಮೋದಿ ಒತ್ತು

ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮೊಬೈಲ್ ಸಂವಹನ ವ್ಯವಸ್ಥೆಗಳ ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಭೇಟಿ ಮಾಡಿದರು. ಸೈಬರ್ ವಂಚನೆಯಿಂದ ಜನರನ್ನು ರಕ್ಷಿಸಲು ನಿಯಮಿತ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದು ಹಾಗೂ ಕೃತಕ ಬುದ್ಧಿಮತ್ತೆ ಮತ್ತು ನಕಲಿ ದೃಶ್ಯ ತಂತ್ರಜ್ಞಾನದಿಂದ ಸೃಷ್ಟಿಯಾಗುವ ವಿಷಯಗಳ ನೈಜ ಮೂಲವನ್ನು ಗುರುತಿಸಲು ಪರಿಣಾಮಕಾರಿ ವ್ಯವಸ್ಥೆ ರೂಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಹೊಸ ತಂತ್ರಜ್ಞಾನಗಳಿಗೆ ಜಾಗತಿಕ ಮಟ್ಟದಲ್ಲಿ ಸಮಾನ ನಿಯಮಗಳನ್ನು ರೂಪಿಸುವ ಅಗತ್ಯವನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಭಾರತದಲ್ಲಿ 4ಜಿ ಮತ್ತು 5ಜಿ ತಂತ್ರಜ್ಞಾನದ ವೇಗದ ವಿಸ್ತರಣೆ ಹಾಗೂ ಬಲಿಷ್ಠ ಡಿಜಿಟಲ್ ಮೂಲಸೌಕರ್ಯವನ್ನು ಸಂಘದ ಸದಸ್ಯರು ಶ್ಲಾಘಿಸಿದರು. 5ಜಿ, 6ಜಿ, ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಅಂತರ್ಜಾಲ ಕ್ಷೇತ್ರಗಳಲ್ಲಿ ಸಹಕಾರದ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು.

6ಜಿ ಕುರಿತು ವಿಶೇಷ ಸಮಾವೇಶ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ 6ಜಿ ಕುರಿತು ವಿಶೇಷ ಸಮಾವೇಶವನ್ನೂ ಆಯೋಜಿಸಲಾಗಿದೆ. 6ಜಿ ತಂತ್ರಜ್ಞಾನದ ಮಾನದಂಡಗಳು ಹಾಗೂ ಅಗತ್ಯವಿರುವ ತರಂಗಾಂತರಗಳ ಕುರಿತು ಇದರಲ್ಲಿ ಚರ್ಚೆ ನಡೆಯಲಿದೆ. ಭಾರತದಲ್ಲಿ 5ಜಿ ತಂತ್ರಜ್ಞಾನದ ವೇಗದ ವಿಸ್ತರಣೆಯ ಬಳಿಕ ಮುಂದಿನ ಪೀಳಿಗೆಯ ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಜಾಗತಿಕ ಮಾನದಂಡಗಳ ರೂಪಿಸುವಿಕೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ.

ಉಪಗ್ರಹ ಸಂವಹನವೂ ಸಮಾವೇಶದ ಪ್ರಮುಖ ವಿಷಯವಾಗಿದೆ. ಸಾಧನದಿಂದ ನೇರ ಸಂಪರ್ಕ ತಂತ್ರಜ್ಞಾನದ ಮೂಲಕ ಮೊಬೈಲ್ ಫೋನ್‌ಗಳಿಗೆ ಉಪಗ್ರಹ ಸಂಪರ್ಕ ಒದಗಿಸುವುದು ಹಾಗೂ ಭಾರತದಲ್ಲಿ ಉಪಗ್ರಹ ಅಂತರ್ಜಾಲ ಸೇವೆಗಳ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande