
ನವದೆಹಲಿ, 07 ಅಕ್ಟೋಬರ್ (ಹಿ.ಸ.):
ಸ್ವಚ್ಛ ಹಾಗೂ ಸುಸ್ಥಿರ ಇಂಧನ ಆಯ್ಕೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗೇಲ್ ಲಿಮಿಟೆಡ್ ತನ್ನ ಗ್ರಾಹಕ ಜಾಗೃತಿ ಅಭಿಯಾನ ‘ವಾಹ್ ಕ್ಯಾ ಎನರ್ಜಿ ಹೈ’ ಯ ಎರಡನೇ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಅಭಿಯಾನದ ಅಂಗವಾಗಿ ಗೇಲ್ನ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ನಾಲ್ಕು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ‘ನಯೇ ಭಾರತ್ ಕಿ ನಯೀ ಎನರ್ಜಿ’ ಎಂಬ ಅಭಿಯಾನದ ಗೀತೆಯನ್ನೂ ಬಿಡುಗಡೆ ಮಾಡಲಾಗಿದೆ.
ಸಂಕುಚಿತ ನೈಸರ್ಗಿಕ ಅನಿಲ, ಪೈಪ್ ಮೂಲಕ ಪೂರೈಸುವ ನೈಸರ್ಗಿಕ ಅನಿಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ ಸೇರಿದಂತೆ ಸ್ವಚ್ಛ ಇಂಧನ ಪರ್ಯಾಯಗಳ ಬಳಕೆಗೆ ಜನರನ್ನು ಪ್ರೇರೇಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ನೈಸರ್ಗಿಕ ಅನಿಲವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸರಳ ಕಥೆಗಳ ಮೂಲಕ ಕಿರುಚಿತ್ರಗಳಲ್ಲಿ ವಿವರಿಸಲಾಗಿದೆ.
ಮಿಶ್ರಾ ಕುಟುಂಬದ ಜೀವನದ ವಿವಿಧ ಸಂದರ್ಭಗಳನ್ನು ಆಧರಿಸಿ ರೂಪಿಸಿರುವ ಈ ಚಿತ್ರಗಳಲ್ಲಿ ವಾರಾಣಸಿ ಪ್ರವಾಸ, ಕುಟುಂಬದ ಸಂಭ್ರಮ, ಸಂಬಂಧಿಕರ ಭೇಟಿ ಹಾಗೂ ಕಾರ್ಖಾನೆಯ ಕಾರ್ಯಕ್ರಮದಂತಹ ದೈನಂದಿನ ಸನ್ನಿವೇಶಗಳನ್ನು ಬಳಸಿಕೊಳ್ಳಲಾಗಿದೆ.
ಯುವಜನರು, ವಿಶೇಷವಾಗಿ ಜೆನ್ ಝಡ್ ಪೀಳಿಗೆ, ಇಂಧನ ಬಳಕೆಯ ಭವಿಷ್ಯದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅಭಿಯಾನದಲ್ಲಿ ಅವರಿಗೆ ವಿಶೇಷ ಗಮನ ನೀಡಲಾಗಿದೆ.
ಹಾಸ್ಯ ಮತ್ತು ಮನರಂಜನೆಯ ಮೂಲಕ ಸ್ವಚ್ಛ ಇಂಧನ ಆಯ್ಕೆಗಳ ಕುರಿತು ಚಿಂತಿಸುವಂತೆ ಗ್ರಾಹಕರನ್ನು ಪ್ರೇರೇಪಿಸುವ ಪ್ರಯತ್ನ ಮಾಡಲಾಗಿದೆ.
ಗೇಲ್ ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕ ಆಯುಷ್ ಗುಪ್ತಾ ಮಾತನಾಡಿ, “‘ವಾಹ್ ಕ್ಯಾ ಎನರ್ಜಿ ಹೈ’ ಎರಡನೇ ಆವೃತ್ತಿ ಹಾಗೂ ‘ನಯೇ ಭಾರತ್ ಕಿ ನಯೀ ಎನರ್ಜಿ’ ಗೀತೆಯ ಮೂಲಕ ಸ್ವಚ್ಛ ಇಂಧನ ಆಯ್ಕೆಗಳು ಮತ್ತು ಪರಿಸರ ಜವಾಬ್ದಾರಿಯ ಕುರಿತು ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದರು.
“ಸರಳ ಹಾಗೂ ನೆಲದ ವಾಸ್ತವಕ್ಕೆ ಹತ್ತಿರವಾದ ಕಥೆಗಳ ಮೂಲಕ ಭಾರತೀಯರು ಹೆಚ್ಚು ಜವಾಬ್ದಾರಿಯುತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಇಂಧನ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಭಿಯಾನದ ಉದ್ದೇಶ.
ಯುವಜನರನ್ನು ಇಂಧನ ಪರಿವರ್ತನೆಯ ಪ್ರಮುಖ ಚಾಲಕಶಕ್ತಿಯಾಗಿ ಪರಿಗಣಿಸಿ ಜೆನ್ ಝಡ್ ಪೀಳಿಗೆಯನ್ನು ಅಭಿಯಾನದ ಸಂವಹನದ ಭಾಗವಾಗಿಸಲಾಗಿದೆ” ಎಂದು ಅವರು ತಿಳಿಸಿದರು.
ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ‘ನಯೇ ಭಾರತ್ ಕಿ ನಯೀ ಎನರ್ಜಿ’ ಗೀತೆಯಲ್ಲಿ ಗೇಲ್ ಸಂಸ್ಥೆ ಇಂಧನ ಮೂಲಸೌಕರ್ಯ, ಸಂಕುಚಿತ ಜೈವಿಕ ಅನಿಲ ಹಾಗೂ ವಾರಾಣಸಿಯ ಭಾರತದ ಮೊದಲ ತೇಲುವ CNG ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಚಯಿಸಲಾಗಿದೆ.
ಅಭಿಯಾನವನ್ನು ಸಾಮಾಜಿಕ ಜಾಲತಾಣಗಳು, ಪ್ರಭಾವಿ ವ್ಯಕ್ತಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು, ಡಿಜಿಟಲ್ ಫಲಕಗಳು, ರೇಡಿಯೊ, ಚಿತ್ರಮಂದಿರಗಳು ಹಾಗೂ ಆಟ ಆಧಾರಿತ ಚಟುವಟಿಕೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಗೀತೆಯನ್ನು ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ಗಾನಾ ಮತ್ತು ಜಿಯೋಸಾವನ್ ಸೇರಿದಂತೆ ಪ್ರಮುಖ ಸಂಗೀತ ವೇದಿಕೆಗಳಲ್ಲೂ ಬಿಡುಗಡೆ ಮಾಡಲಾಗಿದೆ.
ಗೇಲ್ ದೇಶಾದ್ಯಂತ 18,700 ಕಿಲೋಮೀಟರ್ಗೂ ಹೆಚ್ಚು ಉದ್ದದ ನೈಸರ್ಗಿಕ ಅನಿಲ ಕೊಳವೆ ಜಾಲವನ್ನು ನಿರ್ವಹಿಸುತ್ತಿದ್ದು, ನೈಸರ್ಗಿಕ ಅನಿಲದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕೊಳವೆ ಮಾರ್ಗ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ನಾಲ್ಕು ಕಿರುಚಿತ್ರಗಳಲ್ಲಿ ನಟರಾದ ಶ್ರೀಕಾಂತ್ ವರ್ಮಾ, ದಿವ್ಯಾ ಜಗದಾಲೆ, ಲವ್ ವಿಸ್ಪುಟೆ ಮತ್ತು ಅಹ್ಮದ್ ಖಾನ್ ಅಭಿನಯಿಸಿದ್ದು, ಸುಸ್ಥಿರತೆ, ಸ್ವಚ್ಛ ಇಂಧನ ಬಳಕೆ ಹಾಗೂ ಉತ್ತಮ ಭವಿಷ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R