
ನವದೆಹಲಿ, 07 ಅಕ್ಟೋಬರ್ (ಹಿ.ಸ.):
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಅ.10ರಂದು ನವದೆಹಲಿಯ ಜಂತರ್-ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ.
ಸಿಜೆಪಿ ವಕ್ತಾರ ಸೌರವ್ ದಾಸ್ ಮತ್ತು ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ಬುಧವಾರ ಪತ್ರಿಕಾ ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆಯ ಕುರಿತು ಮಾಹಿತಿ ನೀಡಿದರು.
ಸೌರವ್ ದಾಸ್ ಮಾತನಾಡಿ, ಸಿಜೆಪಿ, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸೇರಿ ಅ.10ರಂದು ಬೀದಿಗಿಳಿಯಲಿದೆ. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಆಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಅ.10ರ ಪ್ರತಿಭಟನೆಗೆ ಕರೆ ನೀಡಿರುವುದರ ವಿರುದ್ಧ ಪಿತೂರಿ ನಡೆಸುವ ಬದಲು, ವ್ಯವಸ್ಥೆಯ ಸುಧಾರಣೆ ಕುರಿತು ಚರ್ಚಿಸಲು ಯುವಕರ ಪ್ರತಿನಿಧಿ ಮಂಡಳಿಯನ್ನು ಸರ್ಕಾರ ಏಕೆ ಆಹ್ವಾನಿಸಬಾರದು ಎಂದು ಅವರು ಪ್ರಶ್ನಿಸಿದರು. ಪ್ರತಿಭಟನೆಯನ್ನು ದಿಕ್ಕುತಪ್ಪಿಸಲು ಹಾಗೂ ಉದ್ವಿಗ್ನ ಮತ್ತು ಹಿಂಸಾತ್ಮಕ ವಾತಾವರಣ ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ದೀರ್ಘಾವಧಿಯ ಹೋರಾಟಕ್ಕೆ ಸಿದ್ಧರಾಗುವಂತೆ ಕರೆ ನೀಡಿದ ಸೌರವ್ ದಾಸ್, ಎಷ್ಟೇ ಜನರನ್ನು ಬಂಧಿಸಿದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮತದಾನದ ಹಕ್ಕು ಸುರಕ್ಷಿತವಾಗಿದ್ದರೆ ಮಾತ್ರ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎಂದು ಹೇಳಿದರು.
ಅ.10ರಂದು ನಡೆಯಲಿರುವ ಪ್ರತಿಭಟನೆ ದೇಶದ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ನೇಹಾ ಬೋರಾ ಹೇಳಿದರು. ಪ್ರಜಾಪ್ರಭುತ್ವಕ್ಕಾಗಿ ಕೊನೆಯ ಉಸಿರಿನವರೆಗೂ ಹೋರಾಡುತ್ತೇವೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಅಥವಾ ನಾಶಪಡಿಸಲು ಪ್ರಯತ್ನಿಸುವ ಪ್ರತಿಯೊಂದು ಶಕ್ತಿಯ ವಿರುದ್ಧವೂ ದೃಢವಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿದರು
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.