ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ‘ಕೆಮಿಸ್ಟ್ರಿ’ ಸರ್ಪ್ರೈಸ್; ನಭಾ ನಟೇಶ್ ಭರ್ಜರಿ ಕಂಬ್ಯಾಕ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದಂದು ‘ಕೆಮಿಸ್ಟ್ರಿ’ ಸಿನಿಮಾ ಘೋಷಣೆಯಾಗಿದ್ದು, ನಭಾ ನಟೇಶ್ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಕಂಬ್ಯಾಕ್ ಮಾಡಿದ್ದಾರೆ.
dhruva-sarja-birthday-chemistry-movie-announcement-nabha-natesh-comeback


ಬೆಂಗಳೂರು, 06 ಅಕ್ಟೋಬರ್ (ಹಿ.ಸ.):

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು (ಅ.6) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಹೊಸ ಸಿನಿಮಾದ ಘೋಷಣೆಯಾಗಿದ್ದು, ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಸರ್ಪ್ರೈಸ್ ನೀಡಿದೆ. ‘ಕೆಮಿಸ್ಟ್ರಿ’ ಎಂಬ ಶೀರ್ಷಿಕೆಯ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಪ್ರೋಮೋ ಬಿಡುಗಡೆಯಾಗಿದೆ.

ಖ್ಯಾತ ಟಾಲಿವುಡ್ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ನಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ತತ್ಸಮ ತದ್ಭವ’ ಚಿತ್ರದ ಮೂಲಕ ಗಮನಸೆಳೆದಿರುವ ವಿಶಾಲ್ ಆತ್ರೇಯ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಪ್ರೋಮೋದಲ್ಲಿ ಧ್ರುವ ಸರ್ಜಾ ಅವರ ಮಾಸ್ ಹಾಗೂ ಕ್ಲಾಸ್ ಶೈಲಿಯ ಸಂಭಾಷಣೆಗಳು ಗಮನ ಸೆಳೆದಿವೆ. ‘ಪ್ರೀತಿ, ಕೋಪ, ಫೈಟು, ಕೇರಿಂಗ್ ಹಾಗೂ ಬ್ರೇಕಪ್… ಈ ಎಲ್ಲದರ ನಡುವೆ ಇರೋ ಒಂದೇ ಒಂದು ಕಾಮನ್ ಪಾಯಿಂಟ್ ಎಂದರೆ ಅದುವೇ ಕೆಮಿಸ್ಟ್ರಿ’ ಎಂಬ ಡೈಲಾಗ್ ಚಿತ್ರಕ್ಕೆ ಕುತೂಹಲ ಮೂಡಿಸಿದೆ.

ಈವರೆಗೆ ಹೆಚ್ಚಾಗಿ ಆ್ಯಕ್ಷನ್ ಹಾಗೂ ರಗಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಧ್ರುವ ಸರ್ಜಾ, ‘ಕೆಮಿಸ್ಟ್ರಿ’ ಮೂಲಕ ವಿಭಿನ್ನ ಹಾಗೂ ಎಮೋಷನಲ್ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಸಿನಿಮಾದ ಉಳಿದ ತಾರಾಗಣ ಹಾಗೂ ಚಿತ್ರೀಕರಣದ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ಪ್ರಕಟಿಸುವ ಸಾಧ್ಯತೆ ಇದೆ.

ನಭಾ ನಟೇಶ್ ಕನ್ನಡಕ್ಕೆ ವಾಪಸ್‘ಕೆಮಿಸ್ಟ್ರಿ’ ಚಿತ್ರದ ಮತ್ತೊಂದು ವಿಶೇಷವೆಂದರೆ ನಟಿ ನಭಾ ನಟೇಶ್ ಅವರ ಸ್ಯಾಂಡಲ್ವುಡ್ ಕಂಬ್ಯಾಕ್. ‘ವಜ್ರಕಾಯ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಭಾ, ಬಳಿಕ ‘ಲೀ’ ಸಿನಿಮಾದಲ್ಲೂ ನಟಿಸಿದ್ದರು.

ಇದೀಗ ಸುದೀರ್ಘ ವಿರಾಮದ ಬಳಿಕ ಕನ್ನಡಕ್ಕೆ ಮರಳಿರುವ ಅವರು ಮೊದಲ ಬಾರಿಗೆ ಧ್ರುವ ಸರ್ಜಾ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದ ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಭಾ ನಟೇಶ್, ‘ನನ್ನು ದೋಚುಕುಂದುವಟೇ’ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ರಾಮ್ ಪೋತಿನೇನಿ ಜತೆಗಿನ ‘ಇಸ್ಮಾರ್ಟ್ ಶಂಕರ್’ ಸಿನಿಮಾ ಯಶಸ್ಸಿನ ಬಳಿಕ ಅವರಿಗೆ ತೆಲುಗು ಚಿತ್ರರಂಗದಲ್ಲಿ ಉತ್ತಮ ಜನಪ್ರಿಯತೆ ದೊರೆತಿತ್ತು.

ಇದೀಗ ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದೇ ‘ಕೆಮಿಸ್ಟ್ರಿ’ ಘೋಷಣೆಯಾಗಿರುವುದು ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande