ಎಲ್ಲ ಮಾದರಿಗಳ ನಾಯಕತ್ವಕ್ಕೆ ಹರ್ಮನ್ಪ್ರೀತ್ ಕೌರ್ ವಿದಾಯ
ನವದೆಹಲಿ, 06 ಅಕ್ಟೋಬರ್ (ಹಿ.ಸ.): ಭಾರತ ಮಹಿಳಾ ಕ್ರಿಕೆಟ್ ತಂಡದ ಏಕದಿನ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲ ಮಾದರಿಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 2018ರಿಂದ ಪೂರ್ಣಾವಧಿ ಟಿ20 ಅಂತರರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಅವರು, 2022ರಿಂದ ಏಕದಿನ ತಂಡದ ನಾಯಕಿಯಾಗಿದ್ದ
हरमन ने इंस्टाग्राम पर कप्तानी छोड़ने की घोषणा की


ನವದೆಹಲಿ, 06 ಅಕ್ಟೋಬರ್ (ಹಿ.ಸ.):

ಭಾರತ ಮಹಿಳಾ ಕ್ರಿಕೆಟ್ ತಂಡದ ಏಕದಿನ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲ ಮಾದರಿಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 2018ರಿಂದ ಪೂರ್ಣಾವಧಿ ಟಿ20 ಅಂತರರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಅವರು, 2022ರಿಂದ ಏಕದಿನ ತಂಡದ ನಾಯಕಿಯಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ್ದರು.

ಮಹತ್ವದ ಆಟಗಾರ್ತಿ ಮಿಥಾಲಿ ರಾಜ್ ಬಳಿಕ ತಂಡದ ನಾಯಕತ್ವದ ಹೊಣೆ ಹೊತ್ತಿದ್ದ ಹರ್ಮನ್‌ಪ್ರೀತ್, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಪ್ರಕಟಿಸಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ತಿಳಿಸಿದ್ದಾರೆ.

“ಇಂದು ನಾನು ಎಲ್ಲ ಮಾದರಿಗಳಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಇದರಲ್ಲಿ ಹಲವು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಹಾಗೂ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಕ್ಷಣಗಳಿವೆ. ತಂಡ ಮತ್ತು ಭಾರತೀಯ ಮಹಿಳಾ ಕ್ರಿಕೆಟ್‌ಗೆ ನನ್ನ ಎಲ್ಲವನ್ನೂ ನೀಡಿದ್ದೇನೆ. ನನ್ನ ರಕ್ತ, ಬೆವರು, ಸಮಯದ ಜತೆಗೆ ಹಲವು ಬಾರಿ ನನ್ನ ಆಟ ಮತ್ತು ವೈಯಕ್ತಿಕ ಗುರಿಗಳನ್ನೂ ಬದಿಗಿರಿಸಿದ್ದೇನೆ. ಏಕೆಂದರೆ ತಂಡವೇ ಸದಾ ಮೊದಲ ಆದ್ಯತೆ ಎಂಬುದು ನನ್ನ ನಂಬಿಕೆಯಾಗಿತ್ತು” ಎಂದು ಅವರು ಹೇಳಿದ್ದಾರೆ.

ನಾಯಕಿಯಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿತ್ತು. ಅವುಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಲಿಲ್ಲ, ಕೆಲವು ನಿರ್ಧಾರಗಳು ಸುಲಭವಾಗಿರಲಿಲ್ಲ ಮತ್ತು ಕೆಲವೊಮ್ಮೆ ವೈಯಕ್ತಿಕ ಬೆಲೆಯನ್ನೂ ತೆರಬೇಕಾಯಿತು. ಆದರೆ ತಂಡವನ್ನು ಉತ್ತಮಗೊಳಿಸುವುದು ಮತ್ತು ಇತರ ಆಟಗಾರ್ತಿಯರಿಗೆ ಮುಂದೆ ಬರಲು, ತಮ್ಮ ಮೇಲೆ ನಂಬಿಕೆ ಇಡಲು ಹಾಗೂ ತಮ್ಮ ಸಾಮರ್ಥ್ಯದ ಅತ್ಯುತ್ತಮ ರೂಪವನ್ನು ಹೊರತರುವ ಅವಕಾಶ ನೀಡುವುದು ಪ್ರತಿಯೊಂದು ನಿರ್ಧಾರದ ಉದ್ದೇಶವಾಗಿತ್ತು ಎಂದು ಹರ್ಮನ್‌ಪ್ರೀತ್ ತಿಳಿಸಿದ್ದಾರೆ.

ಮೊದಲ ಮಹಿಳಾ ವಿಶ್ವಕಪ್ ಗೆದ್ದ ನಾಯಕಿ

ದಕ್ಷಿಣ ಆಫ್ರಿಕಾವನ್ನು ತವರಿನಲ್ಲೇ ಸೋಲಿಸಿ ಭಾರತಕ್ಕೆ ಮೊದಲ ಬಾರಿಗೆ ಹಿರಿಯ ಮಹಿಳಾ ಐಸಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಡುವ ಮೂಲಕ ಹರ್ಮನ್‌ಪ್ರೀತ್ ಇತಿಹಾಸ ನಿರ್ಮಿಸಿದ್ದಾರೆ. ಹಿರಿಯರ ವಿಭಾಗದಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮೊದಲ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ತಮ್ಮ ನಾಯಕತ್ವದ ಅವಧಿಯಲ್ಲಿ ತಂಡ ಅತ್ಯಂತ ಕಠಿಣ ಹಂತಗಳನ್ನು ಎದುರಿಸಿತು. ಹೃದಯವಿದ್ರಾವಕ ಸೋಲುಗಳು, ಟೀಕೆಗಳು, ಅನುಮಾನಗಳು ಹಾಗೂ ಪ್ರತಿಕೂಲ ಪರಿಸ್ಥಿತಿಗಳನ್ನು ಕಂಡಿದ್ದೇನೆ. ಅದೇ ವೇಳೆ ಗೆಲುವುಗಳು, ಸಂಭ್ರಮ, ದೇಶವನ್ನು ಪ್ರತಿನಿಧಿಸುವ ಹೆಮ್ಮೆ ಹಾಗೂ ಪ್ರತಿಯೊಂದು ತ್ಯಾಗವನ್ನೂ ಸಾರ್ಥಕಗೊಳಿಸಿದ ಕ್ಷಣಗಳನ್ನೂ ಅನುಭವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ನಾಲ್ಕು ಏಷ್ಯಾ ಕಪ್ ಪ್ರಶಸ್ತಿಗಳನ್ನು ಗೆದ್ದಿದೆ. 2012, 2016, 2022 ಹಾಗೂ 2026ರಲ್ಲಿ ಭಾರತ ಏಷ್ಯಾ ಕಪ್ ಚಾಂಪಿಯನ್ ಆಗಿದೆ. ಏಷ್ಯನ್ ಕ್ರೀಡಾಕೂಟದಲ್ಲಿಯೂ ಭಾರತ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದು, 2022ರ ಹ್ಯಾಂಗ್‌ಝೌ ಹಾಗೂ 2026ರ ಐಚಿ-ನಗೋಯಾ ಕ್ರೀಡಾಕೂಟಗಳಲ್ಲಿ ಅಗ್ರಸ್ಥಾನ ಪಡೆದಿದೆ.

“ನನ್ನ ಕರ್ತವ್ಯ ನಿರ್ವಹಿಸಿದ್ದೇನೆ”

ನಾಯಕತ್ವ ತೊರೆಯುವ ನಿರ್ಧಾರದ ಕುರಿತು ಹರ್ಮನ್‌ಪ್ರೀತ್, “ಇಂದು ಭಾವನೆಗಳ ಮಹಾಪೂರದೊಂದಿಗೆ ನಾಯಕತ್ವ ತೊರೆಯುತ್ತಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ ನೆಮ್ಮದಿಯೂ ಇದೆ. ಏಕೆಂದರೆ ನನ್ನ ತಂಡ ಉತ್ತಮ ಸ್ಥಿತಿಯಲ್ಲಿದೆ ಎಂಬ ನಂಬಿಕೆ ನನಗಿದೆ. ಪ್ರತಿಭೆ, ವ್ಯಕ್ತಿತ್ವ, ವಿಶ್ವಾಸ ಮತ್ತು ಭವಿಷ್ಯ ಹೊಂದಿರುವ ತಂಡದ ಭಾಗವಾಗಿ ಮುಂದುವರಿಯಲು ನಾನು ಉತ್ಸುಕಳಾಗಿದ್ದೇನೆ. ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂದು ನನಗನಿಸುತ್ತದೆ. ಈ ತಂಡಕ್ಕೆ ನನ್ನ ಎಲ್ಲವನ್ನೂ ನೀಡಿದ್ದೇನೆ. ಈ ಜವಾಬ್ದಾರಿಯನ್ನು ಹೆಮ್ಮೆಯಿಂದ ನಿರ್ವಹಿಸಿದ್ದೇನೆ” ಎಂದು ಹೇಳಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದಕ್ಕೆ ಸದಾ ಕೃತಜ್ಞಳಾಗಿರುತ್ತೇನೆ. ಈಗ ಹೊಸ ಪುಟ ತೆರೆದುಕೊಳ್ಳುವ ಸಮಯ ಬಂದಿದೆ. ನಾಯಕತ್ವದ ಜವಾಬ್ದಾರಿ ಇಂದು ಮುಗಿಯಬಹುದು, ಆದರೆ ಭಾರತೀಯ ಕ್ರಿಕೆಟ್ ಮೇಲಿನ ನನ್ನ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಲವು ಐತಿಹಾಸಿಕ ಸಾಧನೆಗಳು

ಹರ್ಮನ್‌ಪ್ರೀತ್ ನಾಯಕತ್ವದ ಪ್ರಮುಖ ಸಾಧನೆಗಳಲ್ಲಿ 1999ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಭಾರತ ಮೊದಲ ಬಾರಿಗೆ ದ್ವಿಪಕ್ಷೀಯ ಮಹಿಳಾ ಏಕದಿನ ಸರಣಿ ಗೆದ್ದ ಸಾಧನೆಯೂ ಸೇರಿದೆ. 2022ರಲ್ಲಿ ಭಾರತ ಈ ಐತಿಹಾಸಿಕ ಸಾಧನೆ ಮಾಡಿತ್ತು.

2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಗೆಲುವಿನಲ್ಲಿಯೂ ಅವರು ತಂಡವನ್ನು ಮುನ್ನಡೆಸಿದ್ದರು. 2025ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಮೊದಲ ಬಾರಿಗೆ ಟಿ20 ಅಂತರರಾಷ್ಟ್ರೀಯ ಸರಣಿ ಗೆಲುವನ್ನೂ ತಂದುಕೊಟ್ಟಿದ್ದರು.

ನಾಯಕಿಯಾಗಿ 150ಕ್ಕೂ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಹರ್ಮನ್‌ಪ್ರೀತ್, ಪುರುಷರ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. 150ಕ್ಕೂ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಈ ವರ್ಷ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 270 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದಾಗಲೂ ಹರ್ಮನ್‌ಪ್ರೀತ್ ತಂಡವನ್ನು ಮುನ್ನಡೆಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande