
ಬೆಂಗಳೂರು, 06 ಅಕ್ಟೋಬರ್ (ಹಿ.ಸ.):
ವಿಫಲ ಹಾಗೂ ನಿರುಪಯುಕ್ತ ತೆರೆದ ಕೊಳವೆಬಾವಿಗಳಿಂದ ಮಕ್ಕಳು ಅಪಘಾತಕ್ಕೀಡಾಗುವ ಮತ್ತು ಜಾನುವಾರುಗಳಿಗೆ ಅಪಾಯ ಉಂಟಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ರಾಜ್ಯಾದ್ಯಂತ ‘ಕೊಳವೆಬಾವಿ ಸುರಕ್ಷತಾ ಅಭಿಯಾನ’ ಆರಂಭಿಸಲು ಮುಂದಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿಯಾನದ ರೂಪುರೇಷೆ, ಅನುಷ್ಠಾನ ವಿಧಾನ, ಇಲಾಖಾವಾರು ಮಾಹಿತಿ ಸಂಗ್ರಹ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯಕ್ಕೆ ಸಚಿವರು ಸೂಚಿಸಿದ್ದಾರೆ.
ನೀರು ಸಿಗದೆ ವಿಫಲವಾದ ಅಥವಾ ಬಳಕೆಗೆ ಯೋಗ್ಯವಾಗದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವುದು ಕಡ್ಡಾಯವಾಗಿದೆ. ಉಚ್ಚತಮ ನ್ಯಾಯಾಲಯದ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅಗತ್ಯ ಸುರಕ್ಷತಾ ಕ್ರಮಗಳು ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗೆ ಕಾನೂನುಬದ್ಧ ಅವಕಾಶ ಕಲ್ಪಿಸಲಾಗಿದೆ. ಆದರೂ ದಾಖಲೆಗಳಿಗೆ ಬಾರದ ಅಥವಾ ಸಮರ್ಪಕವಾಗಿ ಮುಚ್ಚದೇ ಉಳಿದಿರುವ ಕೊಳವೆಬಾವಿಗಳು ಇರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
“ಒಂದು ತೆರೆದ ಕೊಳವೆಬಾವಿಯೂ ಮಗುವಿನ ಜೀವಕ್ಕೆ ಅಪಾಯವಾಗಬಾರದು. ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆಯೇ ಕೊರೆಸಿರುವ ಎಲ್ಲ ವಿಫಲ ಮತ್ತು ನಿರುಪಯುಕ್ತ ಕೊಳವೆಬಾವಿಗಳನ್ನು ಗುರುತಿಸಿ, ಅವು ಸುರಕ್ಷಿತವಾಗಿ ಮುಚ್ಚಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಅಗತ್ಯವಿರುವ ಕಡೆ ತಕ್ಷಣ ಮುಚ್ಚುವ ಕ್ರಮ ಕೈಗೊಳ್ಳಲಾಗುವುದು” ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ ಇತರೆ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ವಿಫಲ ಅಥವಾ ತೆರೆದ ಕೊಳವೆಬಾವಿಗಳ ಮಾಹಿತಿಯನ್ನು ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗಳ ಸಮನ್ವಯದಲ್ಲಿ ಅವುಗಳನ್ನು ಸುರಕ್ಷಿತವಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಿಂದ ಅಪಾಯಕಾರಿ ತೆರೆದ ಕೊಳವೆಬಾವಿಗಳ ಮಾಹಿತಿ ಪಡೆಯಲು ವಾಟ್ಸಾಪ್ ಸಂಖ್ಯೆ ಹಾಗೂ ಜಾಲತಾಣ ಆಧಾರಿತ ವರದಿ ವ್ಯವಸ್ಥೆ ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಚಿವರು ಸೂಚಿಸಿದ್ದಾರೆ. ಸ್ಥಳದ ಭೌಗೋಳಿಕ ಗುರುತು ಹೊಂದಿರುವ ಚಿತ್ರಗಳು ಹಾಗೂ ದೂರು ಸ್ವೀಕರಿಸಿದ ನಂತರ ಕೊಳವೆಬಾವಿ ಮುಚ್ಚುವವರೆಗಿನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನೂ ಕಾರ್ಯಯೋಜನೆಯಲ್ಲಿ ಸೇರಿಸುವಂತೆ ತಿಳಿಸಿದ್ದಾರೆ.
“ನಮ್ಮ ಗುರಿ ಕೇವಲ ಇಲಾಖೆಯ ದಾಖಲೆಗಳಲ್ಲಿರುವ ಕೊಳವೆಬಾವಿಗಳನ್ನು ಮುಚ್ಚುವುದಲ್ಲ. ಸರ್ಕಾರದ ಗಮನಕ್ಕೆ ಬಾರದ ಅಪಾಯಕಾರಿ ತೆರೆದ ಕೊಳವೆಬಾವಿಗಳನ್ನೂ ಗುರುತಿಸಿ ಸುರಕ್ಷಿತಗೊಳಿಸಬೇಕು. ರಾಜ್ಯವನ್ನು ‘ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕ’ವನ್ನಾಗಿಸುವುದು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದೆ” ಎಂದು ಸಚಿವರು ಹೇಳಿದ್ದಾರೆ.
ಅಭಿಯಾನಕ್ಕೆ ಸಂಬಂಧಿಸಿದ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಮ್ಮಿನಬಾವಿ ಹಾಗೂ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.