ಸಿಇಸಿ ವಿರುದ್ಧ ಪ್ರತಿಭಟನೆ: ಬಂಧಿತ 17 ಮಂದಿಗೆ ಜಾಮೀನು
ನವದೆಹಲಿ, 06 ಅಕ್ಟೋಬರ್ (ಹಿ.ಸ.): ಮತ ಕಳವು ಆರೋಪದ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬಂಧಿಸಲಾದ 17 ಮಂದಿಗೆ ಪಟ
सांकेतिक।


ನವದೆಹಲಿ, 06 ಅಕ್ಟೋಬರ್ (ಹಿ.ಸ.):

ಮತ ಕಳವು ಆರೋಪದ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬಂಧಿಸಲಾದ 17 ಮಂದಿಗೆ ಪಟಿಯಾಲಾ ಹೌಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅನಿಮೇಶ್ ಕುಮಾರ್ ಅವರು ಅ. 5ರ ರಾತ್ರಿ ಜಾಮೀನು ಮಂಜೂರು ಮಾಡುವ ಆದೇಶ ಹೊರಡಿಸಿದರು. ತಲಾ ₹15 ಸಾವಿರದ ಮುಚ್ಚಳಿಕೆ ಆಧಾರದಲ್ಲಿ 17 ಮಂದಿಯನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿತು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದು ಕಳವಳಕಾರಿ ಸಂಗತಿ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಪೊಲೀಸರು ಬಂಧಿತ ಪತ್ರಕರ್ತರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪಟಿಯಾಲಾ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳನ್ನು ಎರಡು ವಾರಗಳ ಕಾಲ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಇದಕ್ಕೆ ವಕೀಲ ಸೈಮನ್ ಫಾರೂಕಿ ವಿರೋಧ ವ್ಯಕ್ತಪಡಿಸಿದರು.

ಸುಮಾರು 50 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಅವರಲ್ಲಿ ಕೇವಲ 17 ಮಂದಿಯನ್ನು ಮಾತ್ರ ಬಂಧಿಸಲಾಗಿದೆ ಎಂದು ಫಾರೂಕಿ ನ್ಯಾಯಾಲಯಕ್ಕೆ ತಿಳಿಸಿದರು. ಘಟನೆಗೆ ಸಂಬಂಧಿಸಿದ ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಹೇಳಿದರು.

ಆರೋಪಿಗಳು ಯುವಕರಾಗಿದ್ದು, ತಮ್ಮ ಪ್ರಜಾಸತ್ತಾತ್ಮಕ ಹಕ್ಕಿನ ಭಾಗವಾಗಿ ಅಸಮ್ಮತಿ ಹಾಗೂ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದರು ಎಂದು ಫಾರೂಕಿ ವಾದಿಸಿದರು. ಹಲವರು ಗಾಯಗೊಂಡಿದ್ದರೂ ಘಟನೆಯ ಬಳಿಕ ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿಲ್ಲ ಹಾಗೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿಲ್ಲ ಎಂದು ಅವರು ತಿಳಿಸಿದರು.

ನ್ಯಾಯಾಲಯದಲ್ಲಿ ಹಾಜರುಪಡಿಸುವ ವೇಳೆ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಯಲ್ಲಿ ವಶದಲ್ಲಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜಿಲ್ಲೆಯ ಉಪ ಪೊಲೀಸ್ ಆಯುಕ್ತರಿಂದ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು.

ಅಲ್ಲದೆ, ಸಂಸತ್ ಮಾರ್ಗ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ನ್ಯಾಯಾಲಯ ಆದೇಶಿಸಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande