ಎಐ ತಂತ್ರಜ್ಞಾನ ಮೂಲಕ ಯಕ್ಷಗಾನ ಕಲೆಗೆ ಜಾಗತಿಕ ಮನ್ನಣೆ ನೀಡಲು ಸರಕಾರದ ನಿರ್ಧಾರ
ಬೆಂಗಳೂರು, 05 ಅಕ್ಟೋಬರ್ (ಹಿ.ಸ.): ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಯುಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ (ಡಿಜಿಟಲ್ ಆರ್ಕೈವ್ಸ್) ಸ್
yakshagana-digital-archives-ai-era-global-journey-government-approves


ಬೆಂಗಳೂರು, 05 ಅಕ್ಟೋಬರ್ (ಹಿ.ಸ.):

ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಯುಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ (ಡಿಜಿಟಲ್ ಆರ್ಕೈವ್ಸ್) ಸ್ಥಾಪನೆಗೆ ಸರ್ಕಾರ ₹9.5 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಯಕ್ಷಗಾನದ ಸಮಗ್ರ ದಾಖಲೀಕರಣ, ಸಂರಕ್ಷಣೆ ಹಾಗೂ ಮುಂದಿನ ತಲೆಮಾರಿಗೆ ಕಲೆಯನ್ನು ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಡಿಜಿಟಲ್ ಆರ್ಕೈವ್ಸ್ ಸ್ಥಾಪಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಪತ್ರಾಗಾರ ಇಲಾಖೆಗೆ ವಹಿಸಲಾಗಿದೆ.

ಯೋಜನೆ ಕುರಿತು ಸೋಮವಾರ ನಡೆದ ಇಲಾಖಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಪುರುಷೋತ್ತಮ ಬಿಳಿಮಲೆ, “ಯಕ್ಷಗಾನವನ್ನು ಕೇವಲ ದಾಖಲೆಗಳ ಸಂಗ್ರಹಾಲಯವಾಗಿ ಸೀಮಿತಗೊಳಿಸದೆ, ಇಂದಿನ ಕೃತಕ ಬುದ್ಧಿಮತ್ತೆಯ ಯುಗಕ್ಕೆ ಸಂವಾದಿಯಾಗುವ ಡಿಜಿಟಲ್ ವೇದಿಕೆಯಾಗಿ ರೂಪಿಸಬೇಕು” ಎಂದು ಹೇಳಿದರು.

“ಹೊಸ ತಲೆಮಾರನ್ನು ಆಕರ್ಷಿಸುವ ಜೊತೆಗೆ ಯಕ್ಷಗಾನವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕಿದೆ” ಎಂದು ಅವರು ತಿಳಿಸಿದರು.

ಕಲೆಯ ಸಂರಕ್ಷಣೆ ಕೇವಲ ಪ್ರದರ್ಶನಗಳಿಗೆ ಸೀಮಿತವಾಗಬಾರದು. ಯಕ್ಷಗಾನದ ವೈಜ್ಞಾನಿಕ ದಾಖಲೀಕರಣ, ವ್ಯವಸ್ಥಿತ ಸಂಗ್ರಹ, ಬೌದ್ಧಿಕ ಹಕ್ಕುಗಳ ರಕ್ಷಣೆ ಹಾಗೂ ತಂತ್ರಜ್ಞಾನ ಆಧಾರಿತ ಪ್ರಸರಣಕ್ಕೂ ಆದ್ಯತೆ ನೀಡಬೇಕಿದೆ ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.

ಯೋಜನೆಗಾಗಿ ಶೈಕ್ಷಣಿಕ ಪರಿಣಿತರು ಹಾಗೂ ಅನುಭವಿ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಘಟಕವನ್ನು ರಚಿಸುವ ಉದ್ದೇಶವಿದೆ. ಯಕ್ಷಗಾನದ ಪರಂಪರೆ, ಕಲಾವಿದರ ಕೊಡುಗೆ ಮತ್ತು ಕಲೆಯ ವಿವಿಧ ಆಯಾಮಗಳನ್ನು ದಾಖಲಿಸುವುದರ ಜೊತೆಗೆ ಡಿಜಿಟಲ್ ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ತಲುಪಿಸುವ ಪ್ರಯತ್ನ ನಡೆಯಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮಂಜುಶ್ರೀ ಎನ್. ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಸೇರಿದಂತೆ ಪರಿಣಿತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande