ನಾಳೆ ಮಧ್ಯಪ್ರದೇಶದ ಕಾರಂಜಾದಲ್ಲಿ ಸ್ಮೃತಿ ಭವನ, ಬಾಲಾಸಾಹೇಬ್ ದೇವರಸ್ ನೇತ್ರಾಲಯ ಲೋಕಾರ್ಪಣೆ
ಆರ್.ಎಸ್.ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ರಿಂದ ಅ.6ರಂದು ಉದ್ಘಾಟನೆ
सर संघचालक पहुंचेंगे कारंजा, करेंगे नेत्रदान अस्पताल का आरंभ


ಕಾರಂಜಾ (ಬಾಲಾಘಾಟ್), 05 ಅಕ್ಟೋಬರ್ (ಹಿ.ಸ.):

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ಸರಸಂಘಚಾಲಕ ಬಾಲಾಸಾಹೇಬ್ ದೇವರಸ್ ಹಾಗೂ ಹಿರಿಯ ಪ್ರಚಾರಕ ಭಾವುರಾವ್ ದೇವರಸ್ ಅವರ ಪೂರ್ವಜರ ನೆಲವಾದ ಮಧ್ಯಪ್ರದೇಶದ ಕಾರಂಜಾದಲ್ಲಿ ನೂತನ ಸ್ಮೃತಿ ಭವನ ಹಾಗೂ ಬಾಲಾಸಾಹೇಬ್ ದೇವರಸ್ ನೇತ್ರಾಲಯ ನಿರ್ಮಾಣಗೊಂಡಿದ್ದು, ಅಕ್ಟೋಬರ್ 6ರಂದು ಲೋಕಾರ್ಪಣೆಗೊಳ್ಳಲಿದೆ. ಆರ್‌.ಎಸ್‌.ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಾಲಾಸಾಹೇಬ್ ಮತ್ತು ಭಾವುರಾವ್ ದೇವರಸ್ ಸೇವಾ ಟ್ರಸ್ಟ್‌ನ ವತಿಯಿಂದ ಸ್ಮೃತಿ ಭವನ ನಿರ್ಮಿಸಲಾಗಿದ್ದು, ಮಾಧವ ನೇತ್ರಾಲಯದ ವತಿಯಿಂದ ಬಾಲಾಸಾಹೇಬ್ ದೇವರಸ್ ನೇತ್ರಾಲಯವನ್ನು ನಡೆಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಚಿನ್ ಅಗ್ರವಾಲ್ ಸೋಮವಾರ ತಿಳಿಸಿದ್ದಾರೆ. ‘ರಾಷ್ಟ್ರ ಸೇವೆಯೇ ಪರಮ ಧರ್ಮ’ ಎಂಬುದು ಕಾರ್ಯಕ್ರಮದ ಮೂಲ ಆಶಯವಾಗಿದೆ.

ಸ್ಮೃತಿ ಭವನದಲ್ಲಿ ಬಾಲಾಸಾಹೇಬ್ ಹಾಗೂ ಭಾವುರಾವ್ ದೇವರಸ್ ಅವರ ಜೀವನ, ವಿಚಾರಧಾರೆ ಮತ್ತು ಸಂಘ ಕಾರ್ಯಕ್ಕೆ ಅವರು ಸಲ್ಲಿಸಿದ ಸೇವೆಯ ಸ್ಮೃತಿಗಳನ್ನು ಸಂರಕ್ಷಿಸಲಾಗುವುದು. ಮುಂದಿನ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಿ ಭವನವನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ.

ಇದೇ ವೇಳೆ, ಬಾಲಾಸಾಹೇಬ್ ದೇವರಸ್ ನೇತ್ರಾಲಯದ ಮೂಲಕ ಗ್ರಾಮೀಣ ಹಾಗೂ ಅರಣ್ಯ ಪ್ರದೇಶದ ಜನರಿಗೆ ಕಣ್ಣಿನ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಇದುವರೆಗೆ ಕಣ್ಣಿನ ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ತೆರಳಬೇಕಾಗಿದ್ದ ಮಧ್ಯಪ್ರದೇಶದ ಬಾಲಾಘಾಟ್ ಹಾಗೂ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಗಳ ಜನರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಇದರಿಂದ ಸಮಯ, ವೆಚ್ಚ ಮತ್ತು ಪ್ರಯಾಣದ ತೊಂದರೆ ಕಡಿಮೆಯಾಗುವ ನಿರೀಕ್ಷೆ ಇದೆ.

ಕಾರಂಜಾದಲ್ಲಿ ಈಗಾಗಲೇ ಹೊಲಿಗೆ ಯಂತ್ರಗಳ ಮೂಲಕ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದ್ದು, ಇದೀಗ ನೇತ್ರ ಸೇವೆಯೂ ಆರಂಭವಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.

ಟ್ರಸ್ಟ್ ಅಧ್ಯಕ್ಷ ಡಾ. ಪವನ್ ಸ್ಥಾಪಕ್ ಹಾಗೂ ಉಪಾಧ್ಯಕ್ಷ ಅರವಿಂದ್ ಮಾರ್ಡೀಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. ಎರಡು ಕಟ್ಟಡಗಳು ವಿಭಿನ್ನ ಉದ್ದೇಶಗಳನ್ನು ಹೊಂದಿದ್ದು, ಒಂದು ಸ್ಮರಣೆ ಮತ್ತು ಮತ್ತೊಂದು ಸೇವೆಯ ಉದ್ದೇಶವನ್ನು ಈಡೇರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಬಾಲಾಸಾಹೇಬ್ ದೇವರಸ್ ಅವರು ಆರ್‌ಎಸ್‌ಎಸ್‌ನ ಮೂರನೇ ಸರಸಂಘಚಾಲಕರಾಗಿ ಸಂಘಟನೆಯನ್ನು ಮುನ್ನಡೆಸಿದ್ದರು. ಅವರ ಕಿರಿಯ ಸಹೋದರ ಭಾವುರಾವ್ ದೇವರಸ್ ಅವರು ಹಿರಿಯ ಪ್ರಚಾರಕರಾಗಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ತಮ್ಮ ಜೀವನವನ್ನು ರಾಷ್ಟ್ರ ಮತ್ತು ಸಮಾಜ ಸೇವೆಗೆ ಸಮರ್ಪಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾಕೋಶಲ ಹಾಗೂ ವಿದರ್ಭ ಪ್ರಾಂತ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು, ಸಮಾಜ ಸೇವಕರು ಮತ್ತು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಅತಿಥಿಗಳ ವಸತಿ, ಊಟ ಹಾಗೂ ಸಭೆಯ ವ್ಯವಸ್ಥೆಗಳನ್ನು ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ. ಕಾರಂಜಾದಲ್ಲಿ ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಸಂಘದ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.

---------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande