
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೀಟರ್ ರೀಡರ್ಗಳಿಗೆ ಕನಿಷ್ಠ ವೇತನ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕೆಪಿಟಿಸಿಎಲ್-ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿದೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಹೊರಗುತ್ತಿಗೆ ಮೀಟರ್ ರೀಡರ್ಗಳು ಪಾಲ್ಗೊಂಡಿದ್ದಾರೆ.
ಇಂಧನ ಇಲಾಖೆ ಹಾಗೂ ಎಸ್ಕಾಂಗಳು ನಿಗದಿಪಡಿಸಿರುವ ಹಣದಲ್ಲಿ ಏಜೆನ್ಸಿಗಳು ಹೆಚ್ಚಿನ ಮೊತ್ತವನ್ನು ಪಡೆದುಕೊಳ್ಳುತ್ತಿದ್ದು, ಅದರ ಸಮರ್ಪಕ ಪಾಲು ನೌಕರರಿಗೆ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರ ಪ್ರಕಾರ, ಎಸ್ಕಾಂಗಳಿಂದ ಪ್ರತಿ ಮೀಟರ್ ರೀಡಿಂಗ್ಗೆ ಖಾಸಗಿ ಏಜೆನ್ಸಿಗಳಿಗೆ ₹16.75 ನಿಗದಿಪಡಿಸಲಾಗಿದೆ. ಆದರೆ, ನೌಕರರಿಗೆ ಪ್ರತಿ ಮೀಟರ್ ರೀಡಿಂಗ್ಗೆ ಕೇವಲ ₹3.50ರಷ್ಟು ನೀಡಲಾಗುತ್ತಿದೆ.
ಇದರಿಂದ ಕಷ್ಟಪಟ್ಟು ಕೆಲಸ ಮಾಡುತ್ತಿರುವ ಮೀಟರ್ ರೀಡರ್ಗಳಿಗೆ ನ್ಯಾಯಯುತ ವೇತನ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ರಾಜ್ಯಾದ್ಯಂತ ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 2,000 ಮೀಟರ್ ರೀಡರ್ಗಳು ಕಾರ್ಯನಿರ್ವಹಿಸುತ್ತಿದ್ದು, ಐಡಿಯಾ ಇನ್ಫಿನಿಟಿ ಹಾಗೂ KSF9 ಸೇರಿದಂತೆ ಖಾಸಗಿ ಏಜೆನ್ಸಿಗಳ ಮೂಲಕ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ವೇದಿಕೆ ತಿಳಿಸಿದೆ.
ಸರ್ಕಾರದ ಘೋಷಣೆಯಂತೆ ಕನಿಷ್ಠ ₹50 ಸಾವಿರ ವೇತನ ಸಿಗಬೇಕಾದರೂ, ಪ್ರಸ್ತುತ ಖಾಸಗಿ ಏಜೆನ್ಸಿಗಳು ನೌಕರರಿಗೆ ₹12ರಿಂದ ₹14 ಸಾವಿರದವರೆಗೆ ಮಾತ್ರ ಪಾವತಿಸುತ್ತಿವೆ ಎಂದು ಆರೋಪಿಸಲಾಗಿದೆ.
ಸೇವಾ ಭದ್ರತೆ, ವಿಮಾ ಸೌಲಭ್ಯವೂ ಇಲ್ಲಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ವಿಮಾ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ.
ಮೀಟರ್ ರೀಡಿಂಗ್ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಜೀತದಾಳುಗಳ ಮಾದರಿಯಲ್ಲಿ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಇಲಾಖೆ ನೌಕರರ ಹಿತದೃಷ್ಟಿಯಿಂದ ನಿಗದಿಪಡಿಸಿರುವ ಮೊತ್ತ ಸಂಪೂರ್ಣವಾಗಿ ನೌಕರರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.
ಖಾಸಗಿ ಏಜೆನ್ಸಿಗಳ ಮೂಲಕ ನಡೆಯುತ್ತಿರುವ ವೇತನ ಪಾವತಿ ವ್ಯವಸ್ಥೆಯನ್ನು ಪರಿಶೀಲಿಸಿ, ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಹಾಗೂ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನೌಕರರ ಸಮಸ್ಯೆಗಳನ್ನು ಇಂಧನ ಇಲಾಖೆ ತಕ್ಷಣ ಪರಿಹರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕೆಪಿಟಿಸಿಎಲ್-ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R