
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಬೆಂಗಳೂರಿನ ಹುಸ್ಕೂರು ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಕನ್ನಡಿಗರ ವಿರುದ್ಧ ಪರಭಾಷಿಕ ಸಿಬ್ಬಂದಿಯೊಬ್ಬ ದರ್ಪ ತೋರಿದ್ದಾರೆ ಎನ್ನಲಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರಿಗೆ, ‘ಕನ್ನಡಿಗರು ಕೆಲಸ ಬಿಟ್ಟು ಹೋದರೂ ಪರವಾಗಿಲ್ಲ. ಇಲ್ಲಿ ಕೆಲಸ ಮಾಡಬೇಕಿದ್ದರೆ ಹಿಂದಿ ಕಲಿತು ಬನ್ನಿ’ ಎಂದು ಸಿಬ್ಬಂದಿಯೊಬ್ಬರು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕನ್ನಡಿಗರ ವಿರುದ್ಧದ ಅವಹೇಳನಕಾರಿ ಧೋರಣೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ವಲಸಿಗರು ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಘಟನೆ ನಡೆದ ಬೆನ್ನಲ್ಲೇ ಈ ವಿಡಿಯೋ ಕೂಡ ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿದೆ.
‘ಕರ್ನಾಟಕದಲ್ಲೇ ಕನ್ನಡಿಗರಿಗೆ ಕೆಲಸ ಮಾಡಲು ಭಾಷೆಯ ವಿಚಾರದಲ್ಲಿ ಬೆದರಿಕೆ ಹಾಕುವುದು ಖಂಡನೀಯ. ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುವ ಯಾವುದೇ ಪ್ರಯತ್ನವನ್ನು ಸಹಿಸುವಂತಿಲ್ಲ.
ವಿಡಿಯೋದಲ್ಲಿರುವ ಆರೋಪಗಳ ಬಗ್ಗೆ ಪೊಲೀಸರು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R