
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಸಲ್ಲಿಸುವ ಫಾರ್ಮ್-7 ಅರ್ಜಿಗಳ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಫಾರ್ಮ್-7 ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರನ್ನು ತಕ್ಷಣವೇ ಮತದಾರರ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ ಎಂದುಅ ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸುವಂತೆ ಆಕ್ಷೇಪಣೆ ಸಲ್ಲಿಸಲು ಫಾರ್ಮ್-7 ಬಳಸಲಾಗುತ್ತದೆ. ಆದರೆ ಅರ್ಜಿ ಸಲ್ಲಿಕೆಯಾದ ಕೂಡಲೇ ಹೆಸರು ಡಿಲೀಟ್ ಮಾಡುವ ಯಾವುದೇ ಪ್ರಕ್ರಿಯೆ ಇಲ್ಲ.
ಅರ್ಜಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ವಿಚಾರಣೆ ನಡೆಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಚುನಾವಣಾ ಆಯೋಗದ ಅಧಿಕೃತ ಫಾರ್ಮ್-7ರಲ್ಲೂ ಹೆಸರು ಅಳಿಸುವುದು ಪ್ರಸ್ತಾವಿತ ಆಕ್ಷೇಪಣೆಯಾಗಿ ಸಲ್ಲಿಸುವ ಅರ್ಜಿ ಎಂದು ಸ್ಪಷ್ಟಪಡಿಸಲಾಗಿದೆ.
ಸುಳ್ಳು ಅರ್ಜಿಗಳ ವಿರುದ್ಧ ಕ್ರಮ:ಎಸ್ಐಆರ್ ಪ್ರಕ್ರಿಯೆ ವೇಳೆ ಬಲ್ಕ್ ಆಗಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.
ಸುಳ್ಳು ಮಾಹಿತಿ ಅಥವಾ ತಪ್ಪು ಘೋಷಣೆಯನ್ನು ಉದ್ದೇಶಪೂರ್ವಕವಾಗಿ ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಈ ಕ್ರಮಕ್ಕೂ ಮುನ್ನ ನಿಯಮಾನುಸಾರ ವಿಚಾರಣೆ ನಡೆಸುವುದು ಕಡ್ಡಾಯವಾಗಿದೆ.
ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲೂ ಫಾರ್ಮ್-7 ದುರ್ಬಳಕೆ ಆರೋಪ ಕೇಳಿಬಂದಿದ್ದು, 778 ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣದಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೀಗಾಗಿ ಫಾರ್ಮ್-7 ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಅರ್ಹ ಮತದಾರರು ತಕ್ಷಣ ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಬೇಡ.
ಅರ್ಜಿಯ ಸತ್ಯಾಸತ್ಯತೆ ಪರಿಶೀಲನೆ ಹಾಗೂ ನಿಗದಿತ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಹೆಸರು ಅಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R