ರೇಸ್ ಕೋರ್ಸ್ ರಸ್ತೆಯಲ್ಲಿ 60 ದಿನ ಸಂಚಾರ ಸ್ಥಗಿತ: ಪರ್ಯಾಯ ಮಾರ್ಗ ಸೂಚಿಸಿದ ಸಂಚಾರಿ ಪೊಲೀಸರು
ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಿಂದ 60 ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
bengaluru-race-course-road-traffic-ban-for-60-days-due-to-whitetopping-work


ಬೆಂಗಳೂರು, 05 ಅಕ್ಟೋಬರ್ (ಹಿ.ಸ.):

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ರೇಸ್ ಕೋರ್ಸ್ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಇಂದಿನಿಂದ ಮುಂದಿನ 60 ದಿನಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮೌರ್ಯ ಜಂಕ್ಷನ್ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್ವರೆಗೆ ಕಾಮಗಾರಿ ನಡೆಯಲಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ವೈಟ್ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಾನಂದ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಹಾಗೂ ಟ್ರೈಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುವ ಬಿಎಂಟಿಸಿ, ಖಾಸಗಿ ಬಸ್ಗಳು ಹಾಗೂ ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್ ಮೂಲಕ ಎಲ್ಆರ್ಡಿಇ ಜಂಕ್ಷನ್ ತಲುಪಿ, ಅಲ್ಲಿಂದ ಬಲಕ್ಕೆ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಮೂಲಕ ಸಾಗಬೇಕು ಎಂದು ಸೂಚಿಸಲಾಗಿದೆ.

ಮಜೆಸ್ಟಿಕ್ ಕಡೆಗೆ ತೆರಳುವ ವಾಹನಗಳು ಸಂಕಿರಸ್ತೆಯಿಂದ ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ವೃತ್ತ ತಲುಪಿ, ಬಲಕ್ಕೆ ತಿರುಗಿ ಎಸ್ಸಿ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.

ಹಳೆಯ ಜೆಡಿಎಸ್ ಜಂಕ್ಷನ್ನಿಂದ ಟ್ರೈಲೈಟ್ ಜಂಕ್ಷನ್ ಕಡೆಗೆ ತೆರಳುವವರು ರೇಸ್ವ್ಯೂ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ಜಂಕ್ಷನ್ ತಲುಪಬಹುದು.

ಇನ್ನು ಟ್ರೈಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನ ಸವಾರರು ಶಿವಾನಂದ ಫ್ಲೈಓವರ್ ಮೂಲಕ ನೆಹರೂ ವೃತ್ತ ತಲುಪಿ, ಅಲ್ಲಿಂದ ಎಸ್ಸಿ ರಸ್ತೆ ಸೇರಿ ಮಜೆಸ್ಟಿಕ್ ಕಡೆಗೆ ಸಾಗಬಹುದಾಗಿದೆ.

ವೈಟ್ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆ ಸಂಚಾರ ಪೊಲೀಸರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande