
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.
ನಗರದ ಉತ್ತರ ಹಾಗೂ ಕೇಂದ್ರ ಭಾಗದ ಹಲವು ಪ್ರಮುಖ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ತೀವ್ರ ಸಂಚಾರ ದಟ್ಟಣೆಯಿಂದ ಪರದಾಡುವಂತಾಯಿತು.ಬೆಳಿಗ್ಗೆಯಿಂದ ನಗರದ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣವಿತ್ತು.
ಆದರೆ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಏಕಾಏಕಿ ಬಿರುಗಾಳಿಯೊಂದಿಗೆ ಮಳೆ ಆರಂಭವಾಯಿತು. ಕೆಲವೇ ನಿಮಿಷಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಎಂ.ಜಿ. ರಸ್ತೆ, ಇಂದಿರಾನಗರ, ಹೆಬ್ಬಾಳ, ಶಿವಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ.
ಮಳೆಯಿಂದಾಗಿ ತಗ್ಗು ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳ ಕೆಲ ಭಾಗಗಳಲ್ಲಿ ನೀರು ನಿಂತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹಲವೆಡೆ ಸಂಚಾರ ದಟ್ಟಣೆ ಹೆಚ್ಚಾದ ಪರಿಣಾಮ ಕಚೇರಿ ಹಾಗೂ ಇತರೆ ಕೆಲಸಗಳಿಗಾಗಿ ತೆರಳುತ್ತಿದ್ದ ಸಾರ್ವಜನಿಕರು ಪರದಾಡುವಂತಾಯಿತು.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಗಮನಾರ್ಹ ಮಳೆಯಾಗಿರಲಿಲ್ಲ. ಅಲ್ಲಲ್ಲಿ ತುಂತುರು ಮಳೆಯಾಗಿದ್ದರೂ, ಸೋಮವಾರ ಮಧ್ಯಾಹ್ನ ಏಕಾಏಕಿ ಬಿರುಗಾಳಿಯೊಂದಿಗೆ ಭಾರಿ ಮಳೆ ಸುರಿದಿದೆ.
ಹಠಾತ್ ಮಳೆ ಸುರಿದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆಯುವಂತಾಯಿತು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗ ಕುಂಠಿತಗೊಂಡು ಸಂಚಾರ ವ್ಯವಸ್ಥೆ ಮೇಲೆ ಮಳೆಯ ಪರಿಣಾಮ ಬೀರಿತು.
ನಗರದ ವಿವಿಧೆಡೆ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಹಾಗೂ ಜಲಾವೃತ ಪ್ರದೇಶಗಳಲ್ಲಿ ಅನಗತ್ಯವಾಗಿ ತೆರಳದಂತೆ ಜಿಬಿಎ ಅಧಿಕಾರಿಗಳು ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R