



ನಾಲ್ಕು ರಾಜ್ಯಗಳಲ್ಲಿ ರಾಜ್ಯ ಸಲಹಾ ಬೆಲೆ ಜಾರಿ; ಕರ್ನಾಟಕದ 16 ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಮಾತ್ರ ಏಕೆ ಇಲ್ಲ? — ಹೆಚ್ಚುವರಿ ಬೆಲೆಗಾಗಿ ಸರ್ಕಾರದತ್ತ ಸಿಹಿದಾತರ ಚಿತ್ತ
ಹುಬ್ಬಳ್ಳಿ, 05 ಅಕ್ಟೋಬರ್ (ಹಿ.ಸ.):
ಕಬ್ಬಿಗೆ ಹೆಚ್ಚಿನ ಬೆಲೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ರಾಜ್ಯದ ಕಬ್ಬು ಬೆಳೆಗಾರರು ಹೋರಾಟದ ಹಾದಿ ಹಿಡಿದಿರುವ ಬೆನ್ನಲ್ಲೇ, ಕಬ್ಬಿನ ಬೆಲೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಜತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ಘೋಷಿಸಬೇಕೆಂಬ ಆಗ್ರಹ ಕಬ್ಬು ಬೆಳೆಗಾರರಿಂದ ಕೇಳಿಬರುತ್ತಿದೆ.
ಕಬ್ಬು ಬೆಳೆಗಾರರ ಬೇಡಿಕೆ ನ್ಯಾಯಯುತವಾಗಿದ್ದರೂ, ಬೆಲೆ ಹೆಚ್ಚಳಕ್ಕಾಗಿ ಯಾವ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬ ಗೊಂದಲ ರೈತರಲ್ಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೇ, ರಾಜ್ಯ ಸರ್ಕಾರವೇ ಹೆಚ್ಚುವರಿ ಬೆಲೆ ಘೋಷಿಸಬೇಕೇ ಎಂಬ ಪ್ರಶ್ನೆ ಇದೀಗ ಪ್ರಮುಖವಾಗಿದೆ.
ಕೇಂದ್ರ ಸರ್ಕಾರ ಕಬ್ಬಿಗೆ ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹365ರ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಿದೆ. ಮತ್ತೊಂದೆಡೆ ಸಕ್ಕರೆಗೆ ಪ್ರತಿ ಕ್ವಿಂಟಲ್‌ಗೆ ₹31ರ ಕನಿಷ್ಠ ಮಾರಾಟ ಬೆಲೆಯನ್ನು ನಿಗದಿಪಡಿಸಲಾಗಿದೆ. ಕಬ್ಬು ಬೆಳೆಗಾರರಿಗೆ ನೇರವಾಗಿ ಅನ್ವಯಿಸುವುದು ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿದ್ದರೆ, ಸಕ್ಕರೆ ಕಾರ್ಖಾನೆಗಳಿಗೆ ಕನಿಷ್ಠ ಮಾರಾಟ ಬೆಲೆ ಅನ್ವಯಿಸುತ್ತದೆ.
ಈ ಎರಡರ ನಡುವಿನ ವ್ಯತ್ಯಾಸವನ್ನು ಅರಿಯದೆ ಕಬ್ಬು ಬೆಳೆಗಾರರಲ್ಲಿ ಕನಿಷ್ಠ ಮಾರಾಟ ಬೆಲೆಯ ಬಗ್ಗೆಯೂ ಬೇಡಿಕೆ ವ್ಯಕ್ತವಾಗುತ್ತಿದೆ. ಆದರೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳದಿಂದ ಕಬ್ಬು ಬೆಳೆಗಾರರಿಗೆ ನೇರವಾಗಿ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಬದಲಿಗೆ ಸಕ್ಕರೆಯ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಅದರ ಹೊರೆ ಸಾಮಾನ್ಯ ಗ್ರಾಹಕರ ಮೇಲೂ ಬೀಳಬಹುದು.
ಇದೇ ಕಾರಣಕ್ಕೆ ಕಬ್ಬು ಬೆಳೆಗಾರರ ಆದಾಯ ಹೆಚ್ಚಿಸುವ ನೇರ ಮಾರ್ಗವಾಗಿ ರಾಜ್ಯ ಸರ್ಕಾರ ರಾಜ್ಯ ಸಲಹಾ ಬೆಲೆ ಘೋಷಿಸಬೇಕು ಎಂಬ ವಾದ ಬಲ ಪಡೆಯುತ್ತಿದೆ.
ರಾಜ್ಯ ಸಲಹಾ ಬೆಲೆ ನೀಡುವ ಅವಕಾಶವಿದ್ದರೂ ಕರ್ನಾಟಕದಲ್ಲಿ ಏಕೆ ಇಲ್ಲ?
ಕೇಂದ್ರ ಸರ್ಕಾರ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಿದರೂ, ಕಬ್ಬು ಉತ್ಪಾದಿಸುವ ರಾಜ್ಯಗಳಿಗೆ ಅದಕ್ಕಿಂತ ಹೆಚ್ಚುವರಿ ಬೆಲೆ ನಿಗದಿಪಡಿಸುವ ಅವಕಾಶವಿದೆ. ದೇಶದ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ರೈತರಿಗೆ ಕೇಂದ್ರದ ಬೆಲೆ ಬೆಂಬಲದ ಜತೆಗೆ ರಾಜ್ಯ ಸಲಹಾ ಬೆಲೆಯನ್ನೂ ನೀಡಲಾಗುತ್ತಿದೆ.
ಈ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರಿಗೆ ₹355ರಿಂದ ₹416ರವರೆಗೆ ರಾಜ್ಯ ಸಲಹಾ ಬೆಲೆ ನೀಡಲಾಗುತ್ತಿದೆ.
ಆದರೆ ಕರ್ನಾಟಕದಲ್ಲಿ ಇಂತಹ ರಾಜ್ಯ ಸಲಹಾ ಬೆಲೆ ವ್ಯವಸ್ಥೆ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಕ್ಕರೆ ನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾವಿರಾರು ರೈತರು ಕಬ್ಬು ಬೆಳೆಯುತ್ತಿದ್ದರೂ, ರಾಜ್ಯ ಸರ್ಕಾರದಿಂದ ಹೆಚ್ಚುವರಿ ಬೆಲೆ ಬೆಂಬಲ ದೊರೆಯುತ್ತಿಲ್ಲ ಎಂಬುದು ರೈತರ ಪ್ರಮುಖ ಅಳಲು.
16 ಜಿಲ್ಲೆಗಳ ಸಿಹಿದಾತರ ಪ್ರಶ್ನೆ
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ ಸೇರಿದಂತೆ ನೀರಾವರಿ ಪ್ರದೇಶಗಳ 16 ಜಿಲ್ಲೆಗಳಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
ಇಷ್ಟೊಂದು ವ್ಯಾಪಕ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರೂ ರಾಜ್ಯ ಸರ್ಕಾರದಿಂದ ರಾಜ್ಯ ಸಲಹಾ ಬೆಲೆ ನೀಡದಿರುವುದು ಏಕೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಕಬ್ಬಿಗೆ ₹50 ಹೆಚ್ಚುವರಿ ದರ ನೀಡಲಾಗಿತ್ತು ಎಂಬುದನ್ನು ಹೊರತುಪಡಿಸಿದರೆ, ಕಬ್ಬು ಬೆಳೆಗಾರರಿಗೆ ನಿರಂತರವಾಗಿ ರಾಜ್ಯದ ಹೆಚ್ಚುವರಿ ಬೆಲೆ ಬೆಂಬಲ ದೊರೆತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಹೀಗಾಗಿ, ಕೇಂದ್ರದ ಬೆಲೆ ಬೆಂಬಲದ ಜತೆಗೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿ ನಿಭಾಯಿಸಿ ರಾಜ್ಯ ಸಲಹಾ ಬೆಲೆ ಘೋಷಿಸಬೇಕು ಎಂಬ ಬೇಡಿಕೆ ತೀವ್ರಗೊಳ್ಳುತ್ತಿದೆ.
ಕಬ್ಬಿನ ಬೆಲೆ ಹೆಚ್ಚಳಕ್ಕೆ ಕೇಂದ್ರದತ್ತ ರೈತರ ಚಿತ್ತ
ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಕ್ಟೋಬರ್ 12ರಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಗೆ ವೇದಿಕೆ ಕಲ್ಪಿಸಿರುವುದು ರೈತರ ಹೋರಾಟಕ್ಕೆ ಹೊಸ ತಿರುವು ನೀಡಿದೆ.
ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಕೇಂದ್ರ ಸರ್ಕಾರ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಡಲಾಗುತ್ತಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕ ಸಿದ್ದಣ್ಣ ತೇಜಿ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯಿಂದ ಬಳಲುತ್ತಿದ್ದು ರಾಜ್ಯ ಸಲಹಾ ಬೆಲೆ ನೀಡುವ ಬಗ್ಗೆ ರೈತರಿಗೆ ನಂಬಿಕೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಯಯುತ ಮತ್ತು ಲಾಭದಾಯಕ ಬೆಲೆ, ಕನಿಷ್ಠ ಮಾರಾಟ ಬೆಲೆ; ವ್ಯತ್ಯಾಸವೇನು?
ಕಬ್ಬಿನ ಬೆಲೆ ವಿಚಾರದಲ್ಲಿ ಪ್ರಮುಖವಾಗಿ ಮೂರು ಪದಗಳು ಮುನ್ನೆಲೆಗೆ ಬರುತ್ತಿವೆ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ, ಕನಿಷ್ಠ ಮಾರಾಟ ಬೆಲೆ ಹಾಗೂ ರಾಜ್ಯ ಸಲಹಾ ಬೆಲೆ.
ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನೇರವಾಗಿ ಕಬ್ಬು ಬೆಳೆಗಾರರಿಗೆ ಸಂಬಂಧಿಸಿದೆ. ಪ್ರಸ್ತುತ ಇದು ಪ್ರತಿ ಕ್ವಿಂಟಲ್‌ಗೆ ₹365ರಷ್ಟಿದೆ. ಸಕ್ಕರೆ ಕಾರ್ಖಾನೆಗಳು ಈ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಕಬ್ಬು ಖರೀದಿಸುವಂತಿಲ್ಲ.
ಶೇ.10.25ಕ್ಕಿಂತ ಹೆಚ್ಚಿನ ಸಕ್ಕರೆ ಇಳುವರಿ ದೊರೆತರೆ ಪ್ರತಿ ಶೇ.0.1ರ ಹೆಚ್ಚುವರಿ ಇಳುವರಿಗೆ ಪ್ರತಿ ಕ್ವಿಂಟಲ್‌ಗೆ ₹3.56 ಹೆಚ್ಚುವರಿ ದರ ನೀಡಬೇಕು. ಶೇ.9.5ಕ್ಕಿಂತ ಕಡಿಮೆ ಇಳುವರಿ ಇರುವ ಕಬ್ಬಿಗೂ ಕನಿಷ್ಠ ₹338.3ರ ಬೆಲೆ ನಿಗದಿಯಾಗಿದೆ.
ಕನಿಷ್ಠ ಮಾರಾಟ ಬೆಲೆ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯಿಸುತ್ತದೆ. ಸಕ್ಕರೆ ಕಾರ್ಖಾನೆಗಳು ನಿಗದಿತ ಬೆಲೆಗಿಂತ ಕಡಿಮೆ ದರದಲ್ಲಿ ಸಕ್ಕರೆ ಮಾರಾಟ ಮಾಡದಂತೆ ಇದು ಬೆಲೆ ರಕ್ಷಣೆ ನೀಡುತ್ತದೆ. ಪ್ರಸ್ತುತ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ₹31ರಷ್ಟಿದೆ.
ರಾಜ್ಯ ಸಲಹಾ ಬೆಲೆ ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಕೇಂದ್ರದ ಬೆಲೆಯ ಮೇಲೆ ಹೆಚ್ಚುವರಿಯಾಗಿ ನಿಗದಿಪಡಿಸುವ ಬೆಲೆಯಾಗಿದೆ. ನೆರೆಯ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಕರ್ನಾಟಕದಲ್ಲೂ ಇದೇ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ರೈತರ ಪ್ರಮುಖ ಬೇಡಿಕೆ.
ಕೇಂದ್ರ ಸರ್ಕಾರದ ಬೆಲೆ ಬೆಂಬಲ
ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2018ರಿಂದ ಪ್ರತಿ ವರ್ಷ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಹೆಚ್ಚಿಸುತ್ತ ಬಂದಿದೆ. 2014-15ರಲ್ಲಿ ಪ್ರತಿ ಕ್ವಿಂಟಲ್‌ಗೆ ₹220ರಷ್ಟಿದ್ದ ಬೆಲೆ ಈಗ ₹365ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು ಶೇ.66ರಷ್ಟು ಹೆಚ್ಚಳವಾಗಿದೆ.
ಕಬ್ಬು ಬೆಳೆಗಾರರ ಜತೆಗೆ ಸಕ್ಕರೆ ಕಾರ್ಖಾನೆಗಳನ್ನೂ ಉಳಿಸುವ ಉದ್ದೇಶದಿಂದ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಲಾಗಿದೆ. ಎಥೆನಾಲ್ ಉತ್ಪಾದನೆ ಹಾಗೂ ಖರೀದಿಗೆ ಉತ್ತೇಜನ ನೀಡಲಾಗಿದೆ. ಹೆಚ್ಚುವರಿ ಸಕ್ಕರೆ ರಫ್ತಿಗೂ ಅವಕಾಶ ಕಲ್ಪಿಸಲಾಗಿದೆ.
ಬಾಕಿ ಪಾವತಿಗೂ ಒತ್ತು
2015ಕ್ಕೂ ಮುನ್ನ ಕಬ್ಬಿನ ಬಾಕಿ ಹಣ ಪಾವತಿಗಾಗಿ ರೈತರು ಹಲವು ಬಾರಿ ಹೋರಾಟ ನಡೆಸುತ್ತಿದ್ದರು. ಹಿಂದಿನ ಆಡಳಿತದ ಅವಧಿಯ ಸುಮಾರು ₹23,000 ಕೋಟಿ ಬಾಕಿಯಲ್ಲಿ ₹16,600 ಕೋಟಿ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದಿಸಲಾಗುತ್ತಿದೆ.
2024-25ರ ಸಕ್ಕರೆ ಹಂಗಾಮಿನಲ್ಲಿ ಒಟ್ಟು ₹1,02,687 ಕೋಟಿ ಬಾಕಿ ಮೊತ್ತದಲ್ಲಿ 2026ರ ಏಪ್ರಿಲ್ 20ರ ವೇಳೆಗೆ ₹1,02,209 ಕೋಟಿ ಪಾವತಿಸಲಾಗಿದೆ. ಶೇ.99.5ರಷ್ಟು ಬಾಕಿ ವಿಲೇವಾರಿಯಾಗಿದೆ ಎಂದು ಕೇಂದ್ರದ ಅಂಕಿ-ಅಂಶಗಳು ಹೇಳುತ್ತವೆ.
2025-26ರ ಸಕ್ಕರೆ ಹಂಗಾಮಿನಲ್ಲೂ ಆಗಸ್ಟ್ 20ರ ವೇಳೆಗೆ ಶೇ.97ರಷ್ಟು ಬಾಕಿ ಹಣ ಪಾವತಿಸಲಾಗಿದೆ ಎಂದು ಹೇಳಲಾಗಿದೆ.
ಎಥೆನಾಲ್‌ನಿಂದ ಕಾರ್ಖಾನೆಗಳಿಗೆ ಪರ್ಯಾಯ ಆದಾಯ
ಕಬ್ಬಿನಿಂದ ಸಕ್ಕರೆ ಮಾತ್ರವಲ್ಲದೆ ಎಥೆನಾಲ್ ಉತ್ಪಾದನೆಗೂ ಉತ್ತೇಜನ ನೀಡಲಾಗಿದೆ. ರಾಷ್ಟ್ರೀಯ ಜೈವಿಕ ಇಂಧನ ನೀತಿ ಮತ್ತು ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಿಂದ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿಯಾಗಿದೆ.
2014-15ರಿಂದ 2024-25ರವರೆಗೆ ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳು ₹1.29 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಿವೆ ಎಂಬ ಮಾಹಿತಿ ನೀಡಲಾಗಿದೆ.
2014-15ರಿಂದ 2025ರ ಅಕ್ಟೋಬರ್‌ವರೆಗೆ ರೈತರಿಗೆ ₹1,36,300 ಕೋಟಿಗೂ ಹೆಚ್ಚಿನ ಮೊತ್ತದ ತ್ವರಿತ ಪಾವತಿಯನ್ನು ಸುಗಮಗೊಳಿಸಲಾಗಿದೆ ಎಂಬುದು ಕೇಂದ್ರದ ವಾದ.
ಸಕ್ಕರೆ ರಫ್ತಿಗೂ ಅವಕಾಶ
ಭಾರತದಲ್ಲಿ ವಾರ್ಷಿಕವಾಗಿ ಸುಮಾರು 300ರಿಂದ 340 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದ್ದು, ದೇಶೀಯ ಬಳಕೆ 280ರಿಂದ 290 ಲಕ್ಷ ಮೆಟ್ರಿಕ್ ಟನ್ ಇದೆ. ಹೆಚ್ಚುವರಿ ಸಕ್ಕರೆಯನ್ನು ವಿದೇಶಗಳಿಗೆ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
2025-26ರಲ್ಲಿ 20 ಲಕ್ಷ ಮೆಟ್ರಿಕ್ ಟನ್‌ವರೆಗೆ ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗಿದ್ದು, ರಫ್ತು ಪ್ರಮಾಣ 0.47 ಲಕ್ಷ ಮೆಟ್ರಿಕ್ ಟನ್‌ನಿಂದ 8 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಶ್ರೀಲಂಕಾ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾ ಪ್ರಮುಖ ಮಾರುಕಟ್ಟೆಗಳಾಗಿವೆ.
ಸಹಕಾರಿ ಕಾರ್ಖಾನೆಗಳಿಗೆ ₹1,000 ಕೋಟಿ ನೆರವು
ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ₹1,000 ಕೋಟಿ ಅನುದಾನ ನೀಡಲಾಗಿದೆ. ಎಥೆನಾಲ್ ಘಟಕ, ಸಹ-ಉತ್ಪಾದನಾ ಘಟಕ ಹಾಗೂ ಕಾರ್ಯನಿರತ ಬಂಡವಾಳಕ್ಕಾಗಿ ₹10,000 ಕೋಟಿ ಸಾಲ ಒದಗಿಸಲಾಗಿದೆ. ಅವಧಿ ಸಾಲದ ಮೇಲಿನ ಬಡ್ಡಿ ದರವನ್ನು ಶೇ.8.5ಕ್ಕೆ ಇಳಿಸಲಾಗಿದೆ.
ಆಧುನೀಕರಣ, ಸಹ-ಉತ್ಪಾದನೆ ಮತ್ತು ಎಥೆನಾಲ್ ಯೋಜನೆಗಳಿಗೆ ಸಕ್ಕರೆ ಅಭಿವೃದ್ಧಿ ನಿಧಿಯಡಿ ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಬ್ಬು ಉತ್ಪಾದನೆಯಲ್ಲೂ ಹೆಚ್ಚಳ
2025-26ರಲ್ಲಿ ದೇಶದ ಕಬ್ಬು ಉತ್ಪಾದನೆ 500 ದಶಲಕ್ಷ ಮೆಟ್ರಿಕ್ ಟನ್‌ಗೆ ತಲುಪಿದೆ. 2015-16ರ 348.44 ದಶಲಕ್ಷ ಮೆಟ್ರಿಕ್ ಟನ್‌ಗೆ ಹೋಲಿಸಿದರೆ ಶೇ.43.5ರಷ್ಟು ಹೆಚ್ಚಳವಾಗಿದೆ.
ಕಬ್ಬು ಬೆಳೆಯುವ ಪ್ರದೇಶವೂ 2015-16ರ 49.27 ಲಕ್ಷ ಹೆಕ್ಟೇರ್‌ನಿಂದ 58.87 ಲಕ್ಷ ಹೆಕ್ಟೇರ್‌ಗೆ ವಿಸ್ತಾರವಾಗಿದೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳುತ್ತಿದ್ದರೂ, ಕರ್ನಾಟಕದ ಕಬ್ಬು ಬೆಳೆಗಾರರ ಪ್ರಶ್ನೆ ಮಾತ್ರ ಇನ್ನೂ ಉಳಿದಿದೆ.
ರಾಜ್ಯ ಸರ್ಕಾರದ ಮುಂದಿರುವ ಸವಾಲು
ಕೇಂದ್ರ ಸರ್ಕಾರದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಒಂದು ಕಡೆ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಮತ್ತೊಂದು ಕಡೆ. ಇವೆರಡರ ನಡುವೆ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಆದಾಯ ಕಲ್ಪಿಸುವ ರಾಜ್ಯ ಸಲಹಾ ಬೆಲೆ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಬಹುದೇ ಎಂಬುದು ಈಗಿನ ಮುಖ್ಯ ಪ್ರಶ್ನೆ.
₹52 ಸಾವಿರ ಕೋಟಿಯ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆ ಹೊಸ ಯೋಜನೆಗಳಿಗೆ ಹಣಕಾಸಿನ ಲಭ್ಯತೆ ಕುರಿತು ಚರ್ಚೆ ನಡೆಯುತ್ತಿರುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಇದೇ ಕಾರಣದಿಂದ ಕಬ್ಬು ಬೆಳೆಗಾರರ ಹೋರಾಟವನ್ನು ಕೇಂದ್ರದತ್ತ ತಿರುಗಿಸಲಾಗುತ್ತಿದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿಬರುತ್ತಿದೆ.
ಆದರೆ ರೈತರ ದೃಷ್ಟಿಯಲ್ಲಿ ಪ್ರಶ್ನೆ ಸರಳವಾಗಿದೆ. ಕೇಂದ್ರದ ಬೆಲೆ ಬೆಂಬಲ ಮುಂದುವರಿಯಲಿ; ಅದರ ಜತೆಗೆ ಕಬ್ಬು ಬೆಳೆಯುವ ರಾಜ್ಯವಾಗಿ ಕರ್ನಾಟಕವೂ ತನ್ನ ಹೊಣೆ ಹೊತ್ತು ಹೆಚ್ಚುವರಿ ಬೆಲೆ ನೀಡಲಿ.
ಕೇಂದ್ರದ ಬೆಲೆ ಬೆಂಬಲದ ಜತೆಗೆ ರಾಜ್ಯದ ಬೆಲೆ ಭರವಸೆ ದೊರೆತರೆ ಮಾತ್ರ ಕರ್ನಾಟಕದ ಕಬ್ಬು ಬೆಳೆಗಾರರ ಹೋರಾಟಕ್ಕೆ ಶಾಶ್ವತ ಪರಿಹಾರದ ದಾರಿ ತೆರೆದುಕೊಳ್ಳಲಿದೆ ಎಂಬ ನಿರೀಕ್ಷೆ ಸಿಹಿದಾತರದ್ದು. ದಸರೆ–ದೀಪಾವಳಿ ವೇಳೆಗೆ ರಾಜ್ಯ ಸರ್ಕಾರ ರಾಜ್ಯ ಸಲಹಾ ಬೆಲೆ ಘೋಷಿಸುವುದೇ ಎಂಬುದೇ ಈಗ ಕಬ್ಬು ಬೆಳೆಗಾರರ ಮುಂದಿರುವ ನಿರೀಕ್ಷೆಯ ಪ್ರಶ್ನೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.