
ನವದೆಹಲಿ, 05 ಅಕ್ಟೋಬರ್ (ಹಿ.ಸ.):
ಸತತ ಎರಡು ಬಾರಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ, ವೆಸ್ಟ್ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯೊಂದಿಗೆ ತವರಿನ ಋತುವನ್ನು ಆರಂಭಿಸಲಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ನೂತನ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹಾಗೂ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರೊಂದಿಗೆ ನಡೆಸಿದ ಮಾತುಕತೆ ಕುರಿತು ಮಾತನಾಡಿದ್ದಾರೆ.
‘ಫಾಲೋ ದಿ ಬ್ಲೂಸ್: ಗೌತಮ್ ಗಂಭೀರ್ ಅನ್ಫಿಲ್ಟರ್ಡ್’ ಕಾರ್ಯಕ್ರಮದಲ್ಲಿ ಗಂಭೀರ್ ಅವರು ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಗುಣಗಳನ್ನು ಪ್ರಶಂಸಿಸಿದರು. ಅಯ್ಯರ್ ಅವರ ಪ್ರಮುಖ ಗುಣವೆಂದರೆ ನಿಸ್ವಾರ್ಥ ಮನೋಭಾವ ಎಂದು ಅವರು ಹೇಳಿದರು.
2024ರಲ್ಲಿ ಕೆಕೆಆರ್ ತಂಡದೊಂದಿಗೆ ಕೆಲಸ ಆರಂಭಿಸಿದಾಗ ಶ್ರೇಯಸ್ ನಾಯಕತ್ವ ವಹಿಸಿದ್ದರು. ತಂಡದ ಹಿತದೃಷ್ಟಿಯಿಂದ ಅಗತ್ಯವಿದ್ದಾಗ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬಿಟ್ಟುಕೊಡಲು ಅವರು ಸಿದ್ಧರಾಗಿದ್ದರು. ಮತ್ತೊಬ್ಬ ಆಟಗಾರನಿಗೆ ಉತ್ತಮ ಅವಕಾಶ ಕಲ್ಪಿಸುವುದು ಅಥವಾ ಎಡಗೈ–ಬಲಗೈ ಬ್ಯಾಟಿಂಗ್ ಸಂಯೋಜನೆಗಾಗಿ ತಮ್ಮ ಸ್ಥಾನ ಬದಲಿಸಿಕೊಳ್ಳುವುದಕ್ಕೂ ಅವರು ಹಿಂಜರಿಯುತ್ತಿರಲಿಲ್ಲ ಎಂದು ಗಂಭೀರ್ ಹೇಳಿದರು.
ಉತ್ತಮ ನಾಯಕನ ಮೊದಲ ಮತ್ತು ಪ್ರಮುಖ ಗುಣವೆಂದರೆ ನಿಸ್ವಾರ್ಥ ಮನೋಭಾವ. ಶ್ರೇಯಸ್ನಲ್ಲಿ ಈ ಗುಣವಿದ್ದು, ನಾಯಕನಾಗಿ ಮುಂದಿನ ಪಯಣದಲ್ಲಿ ಇದು ಅವರ ದೊಡ್ಡ ಶಕ್ತಿಯಾಗಲಿದೆ ಎಂದು ಗಂಭೀರ್ ಹೇಳಿದರು. ಪರಿಶ್ರಮ, ಶಿಸ್ತು, ದೈಹಿಕ ಕ್ಷಮತೆ ಮತ್ತು ವಿಶ್ವದ ಅಗ್ರ ಬ್ಯಾಟರ್ ಆಗಿರುವುದು ಮುಖ್ಯವಾದರೂ, ನಿಸ್ವಾರ್ಥ ಮನೋಭಾವ ಇಲ್ಲದಿದ್ದರೆ ಉಳಿದ ಗುಣಗಳಿಗೆ ಅರ್ಥವಿಲ್ಲ ಎಂದರು.
ಅವಕಾಶಕ್ಕಾಗಿ ವೈಭವ್ ಕಾಯಬೇಕು
ವೈಭವ್ ಸೂರ್ಯವಂಶಿ ಅವರೊಂದಿಗೆ ನಡೆಸಿದ ಮಾತುಕತೆ ಕುರಿತು ಗಂಭೀರ್, ಯುವ ಆಟಗಾರ ಅತ್ಯುತ್ತಮ ಲಯದಲ್ಲಿದ್ದರೂ, ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿರುವ ಕಾರಣ ಅವಕಾಶಕ್ಕಾಗಿ ಕಾಯಬೇಕಾಗಬಹುದು ಎಂದು ಹೇಳಿದರು.
ತಂಡದ ಆಡುವ ಬಳಗವನ್ನು ಸಾಮಾಜಿಕ ಮಾಧ್ಯಮ ಅಥವಾ ಹೊರಗಿನ ಚರ್ಚೆಗಳು ನಿರ್ಧರಿಸುವುದಿಲ್ಲ. ಪಂದ್ಯ ಗೆಲ್ಲಿಸಬಲ್ಲವರು ಯಾರು ಮತ್ತು ಅತ್ಯುತ್ತಮ ಆಡುವ ಬಳಗ ಯಾವುದು ಎಂಬುದನ್ನು ಕೋಚ್ ಹಾಗೂ ನಾಯಕರು ತಂಡದೊಳಗೆ ನಿರ್ಧರಿಸುತ್ತಾರೆ ಎಂದು ಗಂಭೀರ್ ಹೇಳಿದರು.
ವೈಭವ್ ಅವರನ್ನು ಆಡಿಸಲು ಪ್ರಸ್ತುತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಭಿಷೇಕ್ ಅಥವಾ ಸಂಜು ಅವರನ್ನು ಹೊರಗಿಡಬೇಕಾಗುತ್ತದೆ. ಕಳೆದ ಒಂದೂವರೆ ಅಥವಾ ಎರಡು ವರ್ಷಗಳಿಂದ ಪರಿಣಾಮಕಾರಿ ಪ್ರದರ್ಶನ ನೀಡಿರುವ ಆಟಗಾರರ ಸಂಯೋಜನೆಯನ್ನು ಕೇವಲ ಮೂರು ಅಥವಾ ನಾಲ್ಕು ಪಂದ್ಯಗಳ ವೈಫಲ್ಯದ ನಂತರ ಬದಲಿಸಿ, ಪ್ರತಿಭಾವಂತ ಯುವ ಆಟಗಾರನಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.
ತಂಡದೊಳಗೆ ಆಟಗಾರರಿಗೆ ಭದ್ರತೆಯ ಭಾವನೆ ಮೂಡಿಸುವುದು ಮುಖ್ಯ. ಹೀಗಾಗಿ ಕೆಲವೊಮ್ಮೆ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಗಂಭೀರ್ ಹೇಳಿದರು.
ನಿರಂತರತೆ ಕಾಪಾಡುವುದು ಮುಖ್ಯ
ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ, ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎಂದು ಗಂಭೀರ್ ಹೇಳಿದರು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಮುಂದುವರಿಸುವುದು ಸರಿಯಾದ ನಿರ್ಧಾರವಾಗಿದೆ ಎಂದರು.
ಒಂದು ವಿಶ್ವಕಪ್ನಿಂದ ಮತ್ತೊಂದು ವಿಶ್ವಕಪ್ವರೆಗೆ ಅಜೇಯವಾಗಿ ಸಾಗಿದ ನಂತರ ಮತ್ತೊಂದು ವಿಶ್ವಕಪ್ ಗೆದ್ದ ತಂಡ ಕ್ರಿಕೆಟ್ ಇತಿಹಾಸದಲ್ಲಿಲ್ಲ. ಹೀಗಾಗಿ ಒಂದು ಕಳಪೆ ಸರಣಿ ಅಥವಾ ಅಲ್ಲೊಂದು ಇಲ್ಲೊಂದು ಮೂರು ಕೆಟ್ಟ ಪಂದ್ಯಗಳು ಆಟಗಾರರನ್ನು ಕಳಪೆ ಆಟಗಾರರನ್ನಾಗಿಸುವುದಿಲ್ಲ ಹಾಗೂ ತಂಡವನ್ನು ಕೆಟ್ಟ ತಂಡವನ್ನಾಗಿಸುವುದಿಲ್ಲ. ಆದ್ದರಿಂದ ತಂಡದಲ್ಲಿ ನಿರಂತರತೆ ಕಾಪಾಡುವುದು ಅತ್ಯಂತ ಮುಖ್ಯ ಎಂದು ಗಂಭೀರ್ ಹೇಳಿದರು.
ಭಾರತ ಮತ್ತು ವೆಸ್ಟ್ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6ರಂದು ಸಂಜೆ 7 ಗಂಟೆಗೆ ನಡೆಯಲಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.