
ಕೋಲಾರ, ೦೫ ಸೆಪ್ಟೆಂಬರ್ (ಹಿ.ಸ.) : ಸುತ್ತಮುತ್ತಲಿನ ಗಿಡಮೂಲಿಕೆಗಳ ಔಷಧೀಯ ಗುಣಗಳನ್ನು ಅರಿತು ಅವುಗಳನ್ನು ಅಡುಗೆಯಲ್ಲಿ ಬಳಸಿಕೊಂಡರೆ ನಮ್ಮ ಅಡುಗೆ ಕೋಣೆಯೇ ಔಷಧ ಕೋಣೆಯಾಗಲಿದೆ ಎಂದು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಸ್.ಆರ್. ವೆಂಕಟೇಶಪ್ಪ ಅಭಿಪ್ರಾಯಪಟ್ಟರು.
ಮುಳಬಾಗಿಲು ನಗರದಲ್ಲಿ ನಡೆದ ಮನೆ ಮದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಯೊಂದು ಗಿಡಮೂಲಿಕೆಯೂ ತನ್ನದೇ ಆದ ಔಷಧೀಯ ಮಹತ್ವ ಹೊಂದಿದೆ. ಹಿಂದಿನ ಕಾಲದಲ್ಲಿ ಅಜ್ಜ-ಅಜ್ಜಿಯರು ಗಿಡಮೂಲಿಕೆಗಳನ್ನು ಮನೆಮದ್ದಾಗಿ ಬಳಸುತ್ತಿದ್ದರು. ಆ ಪರಂಪರೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಬೇಕು. ಗಿಡಮೂಲಿಕೆಗಳ ಸಮರ್ಪಕ ಬಳಕೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆಗೆ ಸ್ವಲ್ಪ ಸಮಯ ಬೇಕಾದರೂ ದೀರ್ಘಕಾಲೀನ ಪ್ರಯೋಜನ ದೊರೆಯುತ್ತದೆ ಎಂದು ತಿಳಿಸಿದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಹಾಗೂ ಪಾರಂಪರಿಕ ವೈದ್ಯ ಪಂಡಿತ್ ಡಾ. ಹರೀಶ್ ಬಾಬು ಮಾತನಾಡಿ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸಬೇಕು. ಅವುಗಳ ಔಷಧೀಯ ಗುಣಗಳನ್ನು ತಿಳಿದುಕೊಂಡು ಬಳಸುವುದರಿಂದ ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತುಳಸಿ ಸೇರಿದಂತೆ ವಿವಿಧ ಗಿಡಮೂಲಿಕೆಗಳ ಬಳಕೆ, ಬೇವಿನ ಎಲೆ, ಅರಿಶಿನ ಎಲೆ ಹಾಗೂ ಬೆಲ್ಲದ ಸೊಪ್ಪಿನ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು ೨೦ರಿಂದ ೩೦ ಬಗೆಯ ಗಿಡಮೂಲಿಕೆಗಳನ್ನು ಪ್ರತ್ಯಕ್ಷವಾಗಿ ಪರಿಚಯಿಸಲಾಯಿತು. ಅವುಗಳ ಉಪಯೋಗ ಹಾಗೂ ಔಷಧೀಯ ಗುಣಗಳ ಬಗ್ಗೆ ವಿವರಿಸಲಾಯಿತು. ಇಂತಹ ಪಾರಂಪರಿಕ ಜ್ಞಾನವನ್ನು ಉಳಿಸಿ ಬೆಳೆಸುವವರನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದ ಆರೋಗ್ಯ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯದರ್ಶಿ ಮುನಿರತ್ನಯ್ಯ, ಖಜಾಂಚಿ ಸಿದ್ಧಲಿಂಗಯ್ಯ, ಮಹಿಳಾ ಉಪಾಧ್ಯಕ್ಷೆ ಶಾರದಮ್ಮ ನಾರಾಯಣಸ್ವಾಮಿ ಸೇರಿದಂತೆ ನಿವೃತ್ತ ನೌಕರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್