



ಬಳ್ಳಾರಿ, 05 ಅಕ್ಟೋಬರ್ (ಹಿ.ಸ.)
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಬಿಜೆಪಿಯ ಬಿಎಲ್ಓ ಫಾರಂ-7 ಬಳಕೆ ಮಾಡಿರುವ ವಿವಾದ ಬಳ್ಳಾರಿಯಲ್ಲಿ ದಿನೇ ದಿನೇ ರಾಜಕೀಯವಾಗಿ ಪ್ರತಿಷ್ಠೆಯ ವಿಷಯವಾಗಿ ರೂಪುಗೊಳ್ಳುತ್ತಿದೆ.
ಬಿಜೆಪಿ ಮುಖಂಡ, ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಶ್ರೀನಿವಾಸ ಮೋತ್ಕರ್ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳು ಕಾನೂನಿಗೆ ವಿರುದ್ಧವಾಗಿದ್ದು, ಅವುಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು. ಚುನಾವಣಾ ಆಯೋಗದ ಪರವಾನಿಗೆ ಇಲ್ಲದೇ ದಾಖಲಾಗಿರುವ ಪ್ರಕರಣಗಳು ಕಾಂಗ್ರೆಸ್ಸಿಗರು ಮತ್ತು ಪೊಲೀಸರ ತಪ್ಪು ಅಭಿಪ್ರಾಯಗಳಿಂದ ದಾಖಲಾಗಿವೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದೆ.
ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಫಾರಂ - 7 ರ ಪ್ರಕಾರ ಮತದಾರರ ಹೆಸರುಗಳ ಕುರಿತು ಆಕ್ಷೇಪಣೆ ಅಥವಾ ಪರಿಶೀಲನೆಗೆ ಮನವಿ ಸಲ್ಲಿಸುವುದು ಚುನಾವಣಾ ಪ್ರಕ್ರಿಯೆಯ ಭಾಗವಾಗಿದೆ. ಯಾವುದೇ ಮತದಾರರ ಹೆಸರನ್ನು ಅಕ್ರಮವಾಗಿ ತೆಗೆದುಹಾಕುವಂತೆ ತಾವು ಶಿಫಾರಸು ಮಾಡಿಲ್ಲ. ಕಾಂಗ್ರೆಸ್ಸಿಗರು ಮತ್ತು ಶಾಸಕ ನಾರಾ ಭರತರೆಡ್ಡಿ ಅವರು ಅನಗತ್ಯವಾಗಿ ಸಾರ್ವಜನಿಕರಲ್ಲಿ ಈ ಕುರಿತು ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕ ಅವರು ಪೋಲೀಸ್ ಅಧಿಕಾರಿ ಜಾಹ್ನವಿ ಅವರಲ್ಲಿ ವಾದ ಮಂಡನೆ ಮಾಡಿದರು.
ಬಿಜೆಪಿಯ ಪ್ರತಿಭಟನಾಕಾರರು ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದಾಗ, ಪೋಲೀಸರು ಅವರನ್ನು ತಡೆದು ಪೊಲೀಸ್ ವಾಹನದ ಒಳಗಡೆ ಹೋಗಲು ಸೂಚಿಸಿದರು. ಆದರೆ, ಪ್ರತಿಭಟನಾಕಾರರು ಪೊಲೀಸರ ಮಾತುಗಳನ್ನು ಒಪ್ಪದೇ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಆಗ, ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ - ನೂಕಾಟ ಮತ್ತು ತಳ್ಳಾಟಗಳು ನಡೆದವು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.
ಎಸ್ಐಆರ್ ಪ್ರಕ್ರಿಯೆಯಡಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 7,561 ಮತದಾರರ ಹೆಸರುಗಳ ಪರಿಶೀಲನೆಗೆ ಸಂಬಂಧಿಸಿದಂತೆ ಬಿಜೆಪಿ ಬಿಎಲ್ಎ-1, ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಚುನಾವಣಾ ಸಿಬ್ಬಂದಿಯ ಮೇಲೆ ಎಪಿಎಂಸಿ ಮತ್ತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ನಾರಾ ಭರತರೆಡ್ಡಿ ಅವರ ಸಮ್ಮುಖದಲ್ಲಿ ಪ್ರಕರಣ ದಾಖಲಾಗಿದ್ದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಮುಖಂಡರಾದ ಹೆಚ್.ಹನುಮಂತಪ್ಪ, ಎಸ್. ಗುರುಲಿಂಗನಗೌಡ, ಕೆ.ಎ. ರಾಮಲಿಂಗಪ್ಪ, ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ಕೆ.ಹನುಮಂತಪ್ಪ, ಗಣಪಾಲ್ ಐನಾಥ್ರೆಡ್ಡಿ, ಡಾ. ಅರುಣಾ ಕಾಮಿನೇನಿ, ಉಜ್ವಲ ಶ್ರೀಧರ್, ರಾಘವೇಂದ್ರ (ರಘು), ಗುಗ್ಗರಹಟ್ಟಿ ರಾಮಾಂಜಿನಿ, ಸಿಂಧಿಗೇರಿ ದೊಡ್ಡಬಸವ, ಅರುಣ್ ಬಾಲಚಂದ್ರ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು ಮತ್ತು ಬಿಜೆಪಿ ಮುಖಂಡರುಗಳಾದ ಹಲಕುಂದಿ ಮಲ್ಲಿಕಾರ್ಜುನಗೌಡ, ರಾಣಿತೋಟ ವೀರೇಶ್, ಎಸ್. ಈರಣ್ಣ, ಪುಷ್ಟ ಚಂದ್ರಶೇಖರ್, ರಾಮರೆಡ್ಡಿ ಸೇರಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್