
ಕೋಲಾರ, ೦೫ ಅಕ್ಟೋಬರ್ (ಹಿ.ಸ.) ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ತಕ್ಷಣದ ಬಂಧನಕ್ಕೆ ಒತ್ತಾಯಿಸಿ ಕೋಲಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಕೋಲಾರ ನಗರದ ಕಾಂಗ್ರೆಸ್ ಭವನದಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ನಗರದ ಗಾಂಧಿ ಚೌಕ್ ತನಕ ನಡೆಯಿತು.
ಪ್ರಜಾಪ್ರಭುತ್ವದ ಕಂಠಹಿಚುಕುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ಹಾಗೂ ಫಾರಂ-೭ ದುರ್ಬಳಕೆ ಮಾಡಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಎಸಗುತ್ತಿರುವ ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ನಿಷ್ಠೆಯನ್ನು ಸಂವಿಧಾನಕ್ಕಲ್ಲ, ಬದಲಾಗಿ ಕಮಲ ಪಾಳೆಯಕ್ಕೆ ಒತ್ತೆ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಆಯುಕ್ತರು ಬಿಜೆಪಿ ಸದಸ್ಯರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಐಆರ್ ನೆಪದಲ್ಲಿ ರಾಜ್ಯದ ಕೋಟಿಗೂ ಹೆಚ್ಚು ಬಡ ದಲಿತ ಹಾಗೂ ಶೋಷಿತ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಕೊಂದಿರುವ ಅವರನ್ನು ಕೂಡಲೇ ಬಂಧಿಸಬೇಕೆAದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್, ಕಾಂಗ್ರೇಸ್ ಮುಖಂಡರಾದ ಜಯದೇವ್, ವೀರೆಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ, ಶಿವಣ್ಣ, ಬೆಳಗನಹಳ್ಳಿ ಮುನಿವೆಂಕಟಪ್ಪ ಎಸ್ಟಿ ಘಟಕದ ಅಧ್ಯಕ್ಷ ಅಂಬರೀಶ್, ಅಬ್ದುಲ್ ಖಹೀಮ್, ಅನ್ವರ್, ವಿಜಿಕುಮಾರ್, ಕೂಡಾ ಅಧ್ಯಕ್ಣ ಮಹ್ಮದ್ ಅನೀಪ್, ಶಂಶೀರ್, ಸತೀಶ್, ಮುನಿಯಪ್ಪ, ಕೆ.ಕೆ ಮಂಜುನಾಥ್, ಮಹಿಳಾ ಅಧ್ಯಕ್ಷರಾದ ಹೇಮಮಾಲಿನಿ, ಸಂಗೀತ, ಷಫಿ, ರಫಿ, ಫಿರೋಜ್, ಬಾಬರ್ ನೂರ್, ಸೇರಿದಂತೆ ನೂರಾರುಕಾರ್ಯಕರ್ತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್