
ಕೋಲಾರ, ೦೫ ಅಕ್ಟೋಬರ್ (ಹಿ.ಸ) : ಮುಕ್ತ ಮತ್ತು ನ್ಯಾಯ ಸಮ್ಮತ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿದರು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಕ್ಟೋಬರ್ ೬ ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ ೨೩ ರಂದು ಬೆಳಿಗ್ಗೆ ೮:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ ೨೭ ರಂದು ಮತಎಣಿಕೆ ಕಾರ್ಯ ಬೆಂಗಳೂರಿನಲ್ಲಿ ಜರುಗಲಿದೆ. ಈ ಚುನಾವಣೆಯಲ್ಲಿ ಇವಿಎಂ ಯಂತ್ರಗಳ ಬದಲಾಗಿ ಕೇವಲ ಮತಪತ್ರಗಳನ್ನು ಬಳಸಲಾಗುತ್ತದೆ. ಮತದಾರರು ೧ನೇ, ೨ನೇ ಮತ್ತು ೩ನೇ ಪ್ರಾಶಸ್ತ್ಯದ ಆಧಾರದ ಮೇಲೆ ಮತ ಚಲಾಯಿಸಲಿದ್ದಾರೆ. ಮತದಾರರು ತಾವು ಸೇರಿರುವ ತಾಲೂಕಿನ ವ್ಯಾಪ್ತಿಯ ಮತಗಟ್ಟೆಯಲ್ಲಿಯೇ ಮತ ಚಲಾಯಿಸುವುದು ಕಡ್ಡಾಯವಾಗಿದೆ. ಬೇರೆ ತಾಲೂಕುಗಳಲ್ಲಿ ಮತದಾನ ಮಾಡಲು ಅವಕಾಶವಿರುವುದಿಲ್ಲ.
ಜಿಲ್ಲೆಯ ಆರು ತಾಲೂಕುಗಳಲ್ಲಿ ೨೭ ಮುಖ್ಯ ಹಾಗೂ ೧೬ ಪೂರಕ ಸೇರಿದಂತೆ ಒಟ್ಟು ೪೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂತಿಮ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ೧೬,೮೫೪ ಪುರುಷ ಹಾಗೂ ೧೪,೪೮೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೩೧,೩೩೬ ಪದವೀಧರ ಮತದಾರರಿದ್ದಾರೆ. ತಾಲೂಕುವಾರು ಕೋಲಾರ ತಾಲೂಕಿನಲ್ಲಿ ೯,೫೫೭, ಶ್ರೀನಿವಾಸಪುರದಲ್ಲಿ ೫,೭೧೨, ಮುಳಬಾಗಿಲಿನಲ್ಲಿ ೫,೩೮೯, ಮಾಲೂರಿನಲ್ಲಿ ೪,೩೪೬, ಬಂಗಾರಪೇಟೆಯಲ್ಲಿ ೩,೫೬೦ ಹಾಗೂ ಕೆ.ಜಿ.ಎಫ್ ತಾಲೂಕಿನಲ್ಲಿ ೨,೭೭೨ ಮತದಾರರಿದ್ದಾರೆ. ಎಲ್ಲಾ ೪೩ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ತಹಶೀಲ್ದಾರ್ಗಳು ಮತ್ತು ಸೆಕ್ಟರ್ ಅಧಿಕಾರಿಗಳು ಬೆಳಿಗ್ಗೆ ೬ ಗಂಟೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಮತಗಟ್ಟೆಗಳಿಗೆ ರಕ್ಷಣೆಗಾಗಿ ಕಾಂಪೌAಡ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಹಾಗೂ ಅಗತ್ಯ ಪೀಠೋಪಕರಣಗಳು ಕಡ್ಡಾಯವಾಗಿ ಇರಬೇಕು; ಕೊರತೆಯಿದ್ದರೆ ಶಾಲಾ ಅಥವಾ ಚುನಾವಣಾ ಅನುದಾನ ಬಳಸಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಚುನಾವಣಾ ಆಯೋಗದ ಸೂಚನೆಯಂತೆ ಮತಪೆಟ್ಟಿಗೆಗಳನ್ನು ಸ್ವಚ್ಛಗೊಳಿಸಿ, ಲಾಕಿಂಗ್ ವ್ಯವಸ್ಥೆ ಪರೀಕ್ಷಿಸಿ ಭದ್ರವಾದ ಕೊಠಡಿಯಲ್ಲಿರಿಸಬೇಕು. ಅಕ್ಟೋಬರ್ ೨೨ರಂದು ಮಸ್ಟರಿಂಗ್ ನಡೆಯಲಿದ್ದು, ೨೩ರಂದು ಮತದಾನ ಮುಗಿದ ತಕ್ಷಣವೇ ಮತಪೆಟ್ಟಿಗೆಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್ ರೂಂಗೆ ತಂದು ಅಂದೇ ರಾತ್ರಿ ಬೆಂಗಳೂರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಅಕ್ರಮಗಳನ್ನು ತಡೆಯಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲೆಯಾದ್ಯಂತ ಪ್ರತಿ ತಾಲೂಕಿಗೆ ೩ ರಂತೆ ಒಟ್ಟು ೧೮ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, ೬ ವಿಡಿಯೋ ಕಣ್ಗಾವಲು ತಂಡ ಹಾಗೂ ೬ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಸ್ತೆಗಳಲ್ಲಿ ಅಥವಾ ವೇದಿಕೆ ಹಾಕಿ ಪ್ರಚಾರ ಮಾಡುವಂತಿಲ್ಲ. ಖಾಸಗಿ ತೋಟದ ಮನೆಗಳು ಅಥವಾ ರೆಸಾರ್ಟ್ಗಳಲ್ಲಿ ಸಭೆ ಸೇರಿ ಪ್ರಚಾರ ಮಾಡುವುದಿದ್ದರೂ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಲೇಬೇಕು.
ಯಾವುದೇ ದೂರು ಬಂದ ತಕ್ಷಣ ಎಫ್.ಎಸ್.ಟಿ ಮತ್ತು ವಿ.ಎಸ್.ಟಿ ತಂಡಗಳು ಸ್ಥಳಕ್ಕೆ ದಾವಿಸಿ ವಿಡಿಯೋ ಸಾಕ್ಷ್ಯ ಸಂಗ್ರಹಿಸಬೇಕು, ದೂರುಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಂಶು ರಜಪೂತ, ಉಪ ವಿಭಾಗಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಎಲ್ಲಾ ತಹಸೀಲ್ದಾರ್ಗಳು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್