
ನವದೆಹಲಿ, 05 ಅಕ್ಟೋಬರ್ (ಹಿ.ಸ.):
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಕೇವಲ ಔಪಚಾರಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ನೆಲಮಟ್ಟದಲ್ಲಿ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳಿಗೆ ದೃಢ ಹಾಗೂ ನವೀನ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ಸೂಚಿಸಿದರು. ಯೋಜನೆಯ ಮುಂದಿನ ಹಂತ ಸಾಮಾನ್ಯ ರಸ್ತೆ ನಿರ್ಮಾಣಕ್ಕೆ ಸೀಮಿತವಾಗದೆ, ಗುಣಮಟ್ಟದ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತಿರಬೇಕು ಎಂದು ಅವರು ಹೇಳಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ಸೋಮವಾರ ನಡೆದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಎರಡು ದಿನಗಳ ರಾಷ್ಟ್ರೀಯ ಚಿಂತನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್, ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ರೋಹಿತ್ ಕನ್ಸಲ್ ಸೇರಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯದರ್ಶಿಗಳು, ಮುಖ್ಯ ಎಂಜಿನಿಯರ್‌ಗಳು ಹಾಗೂ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೇ ಹಂತದಲ್ಲಿ 62 ಸಾವಿರ ಕಿಲೋಮೀಟರ್‌ಗಳಷ್ಟು ಹೊಸ ರಸ್ತೆ ನಿರ್ಮಾಣದ ಗುರಿ ನಿಗದಿಯಾಗಿದೆ. ಈ ಪೈಕಿ 20 ಸಾವಿರ ಕಿಲೋಮೀಟರ್ ರಸ್ತೆಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಚೌಹಾಣ್ ಹೇಳಿದರು.
ಮಹಾತ್ಮ ಗಾಂಧೀಜಿ ಹೇಳಿದಂತೆ ಅಭಿವೃದ್ಧಿ ಹೊಂದಿದ ಭಾರತದ ಹಾದಿ ಹೊಲದ ಕಾಲುದಾರಿ ಮತ್ತು ಗ್ರಾಮಗಳ ಬೀದಿಗಳ ಮೂಲಕ ಸಾಗುತ್ತದೆ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಅವರು, ಗ್ರಾಮದಿಂದ ಭೋಪಾಲ್‌ಗೆ ವಿದ್ಯಾಭ್ಯಾಸಕ್ಕಾಗಿ ತೆರಳುವಾಗ 13 ಕಿಲೋಮೀಟರ್‌ಗಳಷ್ಟು ದೂರವನ್ನು ಕಾಲುದಾರಿ ಮತ್ತು ಕೆಸರಿನ ನಡುವೆ ಕುದುರೆ ಮೇಲೆ ಪ್ರಯಾಣಿಸಬೇಕಾಗುತ್ತಿತ್ತು ಎಂದು ಹೇಳಿದರು.
ರಸ್ತೆ ಸಂಪರ್ಕವಿಲ್ಲದ ಕಾರಣ ಗರ್ಭಿಣಿಯರು ಮತ್ತು ಗಂಭೀರ ಅಸ್ವಸ್ಥರನ್ನು ಮಂಚದ ಮೇಲೆ ಹೊತ್ತುಕೊಂಡು ಹೋಗಬೇಕಾಗುತ್ತಿತ್ತು. ಕೆಲವರು ಮಾರ್ಗಮಧ್ಯೆಯೇ ಮೃತಪಟ್ಟಿರುವ ನೋವನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಚೌಹಾಣ್ ಹೇಳಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಸ್ಮರಿಸಿದ ಅವರು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು ಗ್ರಾಮೀಣ ಜನಜೀವನ ಮತ್ತು ಆರ್ಥಿಕತೆಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಿದೆ ಎಂದರು. ದೇಶದಲ್ಲಿ ಇದುವರೆಗೆ ಸುಮಾರು 8.50 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿವೆ ಎಂದು ತಿಳಿಸಿದರು.
ಅನುಮೋದನೆಯಿಂದ ಕಾಮಗಾರಿ ಆರಂಭದವರೆಗೆ 72 ದಿನಗಳ ಗಡುವು
ಯೋಜನೆಗಳಲ್ಲಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚೌಹಾಣ್, ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭಿಸಲು 72 ದಿನಗಳ ಕಾಲಮಿತಿ ನಿಗದಿಯಾಗಿದೆ. ಕೆಲವು ರಾಜ್ಯಗಳು ಈ ಗಡುವನ್ನು ಉಲ್ಲಂಘಿಸುತ್ತಿವೆ. ಅಂತಹ ರಾಜ್ಯಗಳ ಸಂಪೂರ್ಣ ವಿವರ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಪದೇಪದೇ ಟೆಂಡರ್ ರದ್ದಾಗುವುದು, ಬಿಡ್‌ಗಳು ಸಲ್ಲಿಕೆಯಾಗದಿರುವುದು ಸೇರಿದಂತೆ ಎದುರಾಗುವ ಸಮಸ್ಯೆಗಳಿಗೆ ಟೆಂಡರ್‌ಗೂ ಮುನ್ನವೇ ಸೂಕ್ತ ಯೋಜನೆ ರೂಪಿಸಿ ಪರಿಹಾರ ಕಂಡುಕೊಳ್ಳಬೇಕು. ಅನಗತ್ಯ ವಿಳಂಬದಿಂದ ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚುವುದರ ಜೊತೆಗೆ ಯೋಜನೆಗಳು ವಿಳಂಬವಾಗುತ್ತವೆ ಎಂದು ಹೇಳಿದರು.
ಅರಣ್ಯ ಅನುಮತಿಗೆ ಪತ್ರ ವ್ಯವಹಾರಕ್ಕೆ ಸೀಮಿತವಾಗಬೇಡಿ
ಅರಣ್ಯ ಮತ್ತು ಪರಿಸರ ಅನುಮತಿಗಳಲ್ಲಿ ಆಗುತ್ತಿರುವ ವಿಳಂಬದ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಕೇವಲ ಪತ್ರ ಬರೆದು ಕುಳಿತುಕೊಳ್ಳುವುದು ಪರಿಹಾರವಲ್ಲ ಎಂದರು. ಅಧಿಕಾರಿಗಳು ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಸಭೆ ನಡೆಸಿ ಬಾಕಿ ಇರುವ ಪ್ರಕರಣಗಳನ್ನು ಒಟ್ಟಾಗಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.
ಹವಾಮಾನ ಬದಲಾವಣೆ, ಪ್ರವಾಹ, ಭೂಕುಸಿತ ಮತ್ತು ಅತಿವೃಷ್ಟಿಯಂತಹ ಸವಾಲುಗಳನ್ನು ಉಲ್ಲೇಖಿಸಿದ ಅವರು, ದೇಶದ ಭೌಗೋಳಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರಾಜ್ಯಗಳಿಗೂ ಒಂದೇ ರೀತಿಯ ಎಂಜಿನಿಯರಿಂಗ್ ಮಾದರಿಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದರು.
ಕಳಪೆ ಕಾಮಗಾರಿ ಮಾಡಿದ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ
ರಸ್ತೆ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಚೌಹಾಣ್ ಸ್ಪಷ್ಟಪಡಿಸಿದರು. ಕಳಪೆ ಕಾಮಗಾರಿ ನಡೆಸುವ ಸಂಸ್ಥೆಗಳನ್ನು ತಕ್ಷಣ ಕಪ್ಪುಪಟ್ಟಿಗೆ ಸೇರಿಸಬೇಕು. ಅದೇ ಗುತ್ತಿಗೆದಾರರು ಬೇರೆ ಹೆಸರು ಅಥವಾ ಸಂಬಂಧಿಕರ ಹೆಸರಿನಲ್ಲಿ ಹೊಸ ಸಂಸ್ಥೆ ಆರಂಭಿಸಿ ಮತ್ತೆ ಕಾಮಗಾರಿಗೆ ಪ್ರವೇಶಿಸದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ, ಕ್ಷೇತ್ರಕ್ಕೆ ತೆರಳಿ ಅನಿರೀಕ್ಷಿತ ತಪಾಸಣೆ ನಡೆಸಬೇಕು ಎಂದು ಹೇಳಿದರು.
ಉತ್ತಮ ಸಾಧನೆ ಮಾಡುವ ರಾಜ್ಯಗಳಿಗೆ ಗೌರವ ಮತ್ತು ಆದ್ಯತೆ ನೀಡಲಾಗುವುದು ಎಂದು ಚೌಹಾಣ್ ತಿಳಿಸಿದರು. ಗುಣಮಟ್ಟದಲ್ಲಿ ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನ ಮುಂಚೂಣಿಯಲ್ಲಿವೆ. ನಿರ್ವಹಣೆಯಲ್ಲಿ ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ಉತ್ತಮ ಸಾಧನೆ ಮಾಡಿವೆ. ಹೊಸ ತಂತ್ರಜ್ಞಾನ ಬಳಕೆಯಲ್ಲಿ ಉತ್ತರ ಪ್ರದೇಶ ಮತ್ತು ಆಸ್ತಿಗಳಿಗೆ ಕ್ಯೂಆರ್ ಸಂಕೇತ ಅಳವಡಿಸುವ ನವೀನತೆಯಲ್ಲಿ ಅಸ್ಸಾಂ ಗಮನಾರ್ಹ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಐದು ವರ್ಷಗಳ ನಿರ್ವಹಣೆ ಕಡ್ಡಾಯ
ರಸ್ತೆ ನಿರ್ಮಾಣದ ಬಳಿಕ ಐದು ವರ್ಷಗಳವರೆಗೆ ಅದರ ನಿರ್ವಹಣೆಯ ಹೊಣೆಗಾರಿಕೆ ಸಂಬಂಧಿತ ಸಂಸ್ಥೆಯದ್ದಾಗಿದೆ ಎಂದು ಸಚಿವರು ಹೇಳಿದರು. ಆರಂಭದಲ್ಲೇ ಉಂಟಾಗುವ ಸಣ್ಣ ಗುಂಡಿಗಳನ್ನು ತಕ್ಷಣ ದುರಸ್ತಿ ಮಾಡಿದರೆ ರಸ್ತೆ ಹಲವು ವರ್ಷಗಳವರೆಗೆ ಸುರಕ್ಷಿತವಾಗಿರುತ್ತದೆ ಎಂದರು.
ಪ್ರಧಾನಮಂತ್ರಿ ಜನಮನ ಯೋಜನೆಯಡಿ ಛತ್ತೀಸ್‌ಗಢ, ಮಹಾರಾಷ್ಟ್ರದ ಗಡ್ಚಿರೋಲಿ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದ ದೂರದ ಹಾಗೂ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಯುದ್ಧಮಟ್ಟದಲ್ಲಿ ರಸ್ತೆ ನಿರ್ಮಾಣ ಕೈಗೊಳ್ಳಬೇಕು. ಇದು ಕೇವಲ ಮೂಲಸೌಕರ್ಯ ನಿರ್ಮಾಣವಲ್ಲ, ನಿಜವಾದ ರಾಷ್ಟ್ರ ಸೇವೆಯಾಗಿದೆ ಎಂದು ಚೌಹಾಣ್ ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲ ಆಶಯವು “ನಿರ್ಮಾಣದಿಂದ ಸಂಪರ್ಕ, ಸಂಪರ್ಕದಿಂದ ನಿರಂತರತೆ, ನಿರಂತರತೆಯಿಂದ ಸಮುದಾಯ” ಆಗಿರಬೇಕು ಎಂದು ಅವರು ತಿಳಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.