ಕೂನೋ ಉದ್ಯಾನದಲ್ಲಿ ಐದು ಚಿರತೆ ಮರಿಗಳ ಜನನ: ಪ್ರಾಜೆಕ್ಟ್ ಚೀತಾಗೆ ಐತಿಹಾಸಿಕ ಕ್ಷಣ; ಭೂಪೇಂದ್ರ ಯಾದವ್
ನವದೆಹಲಿ, 05 ಅಕ್ಟೋಬರ್ (ಹಿ.ಸ.): ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕೂನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಜನಿಸಿದ ಹೆಣ್ಣು ಚಿರತೆ ಕೆಜೆಪಿ21 ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ‘ಪ್ರಾಜೆಕ್ಟ್ ಚೀತಾ’ ಯೋಜನೆಗೆ ಮತ್ತೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತ
चीते के पांच शावक


ನವದೆಹಲಿ, 05 ಅಕ್ಟೋಬರ್ (ಹಿ.ಸ.):

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕೂನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಜನಿಸಿದ ಹೆಣ್ಣು ಚಿರತೆ ಕೆಜೆಪಿ21 ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ‘ಪ್ರಾಜೆಕ್ಟ್ ಚೀತಾ’ ಯೋಜನೆಗೆ ಮತ್ತೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ.

ಕೆಜೆಪಿ21ಗೆ 32 ತಿಂಗಳ ವಯಸ್ಸಾಗಿದ್ದು, ಭಾರತದಲ್ಲಿ ಜನಿಸಿ ಬಳಿಕ ದೇಶದಲ್ಲೇ ಮರಿಗಳಿಗೆ ಜನ್ಮ ನೀಡಿದ ಮೂರನೇ ಹೆಣ್ಣು ಚಿರತೆಯಾಗಿದೆ. ಇದಕ್ಕೂ ಮೊದಲು ಮುಖಿ ಮತ್ತು ಕೆಜಿಪಿ12 ಭಾರತದಲ್ಲಿ ಜನಿಸಿದ ಬಳಿಕ ತಾಯಿಯಾಗಿದ್ದವು.

ಐದು ಹೊಸ ಮರಿಗಳ ಜನನದೊಂದಿಗೆ ಭಾರತದಲ್ಲಿನ ಒಟ್ಟು ಚಿರತೆಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಈ ಪೈಕಿ 41 ಚಿರತೆಗಳು ಭಾರತದಲ್ಲೇ ಜನಿಸಿವೆ.

ಭೂಪೇಂದ್ರ ಯಾದವ್ ಸೋಮವಾರ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಈ ಸಾಧನೆಗಾಗಿ ‘ಪ್ರಾಜೆಕ್ಟ್ ಚೀತಾ’ಗೆ ಸಂಬಂಧಿಸಿದ ಪಶುವೈದ್ಯರು, ಅರಣ್ಯ ಸಿಬ್ಬಂದಿ, ಕ್ಷೇತ್ರ ಸಿಬ್ಬಂದಿ, ನಿರ್ವಹಣಾ ತಂಡ ಹಾಗೂ ಎಲ್ಲ ಸಹಯೋಗಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಸಮರ್ಪಣೆ, ಬದ್ಧತೆ ಮತ್ತು ನಿರಂತರ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದಾರೆ.

ಭಾರತದ ನೆಲದಲ್ಲಿ ಚಿರತೆಗಳ ಮತ್ತೊಂದು ಪೀಳಿಗೆ ಜನಿಸಿರುವುದು, ದೇಶದಲ್ಲಿ ಚಿರತೆಗಳ ಪುನರ್‌ಸ್ಥಾಪನೆಯ ಪಯಣದಲ್ಲಿ ಹೊಸ ಅಧ್ಯಾಯ ಆರಂಭವಾದುದನ್ನು ಸೂಚಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ಕೂನೋದಲ್ಲಿ ನಿರಂತರವಾಗಿ ಚಿರತೆಗಳ ಜನನವಾಗುತ್ತಿರುವುದು ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ಸಂರಕ್ಷಣೆ ಮತ್ತು ಪುನರ್ವಸತಿ ಪ್ರಯತ್ನಗಳ ಮಹತ್ವದ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಐದು ಮರಿಗಳ ಜನನ ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. ಮರಿಗಳ ತಂದೆ ಬೋಟ್ಸ್‌ವಾನಾದಿಂದ ಭಾರತಕ್ಕೆ ತರಲಾಗಿದ್ದ ಗಂಡು ಚಿರತೆಯಾಗಿದ್ದಾನೆ. ಹೀಗಾಗಿ ಈ ಮರಿಗಳ ಜನನದೊಂದಿಗೆ ಭಾರತದಲ್ಲಿ ಬೋಟ್ಸ್‌ವಾನಾ ಮೂಲದ ಚಿರತೆಗಳ ವಂಶಾವಳಿ ಆರಂಭವಾಗಿದೆ. ಇದರಿಂದ ದೇಶದಲ್ಲಿ ಹೆಚ್ಚುತ್ತಿರುವ ಚಿರತೆಗಳ ಸಂಖ್ಯೆಗೆ ಹೊಸ ಅನುವಂಶಿಕ ವಂಶಾವಳಿ ಸೇರ್ಪಡೆಯಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande