
ಕೋಲಾರ, ಅಕ್ಟೋಬರ್ ೦೫ (ಹಿ.ಸ.) : ಇಂದಿನ ಧಾವಂತದ ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಕಾಲಕಾಲಕ್ಕೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹೃದಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಅಲ್ಲದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಹಮ್ಮಿಕೊಂಡಿರುವ ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮಗಳ ಸೌಲಭ್ಯವನ್ನು ಸಂಘದ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಪಡೆದುಕೊಂಡು ಆರ್ಥಿಕ ಹಾಗೂ ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಸಿದ್ಧಗಂಗಯ್ಯ ಟಿ.ಎಸ್. ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಹುತ್ತೂರು ವಲಯದ ಕಾಳಸ್ತಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಆರ್.ಎಲ್. ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಹೃದಯಾಲಯದ ವೈದ್ಯಾಧಿಕಾರಿ ಡಾ.ಅರಸಲಿನ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಇಂತಹ ಆರೋಗ್ಯ ಶಿಬಿರಗಳು ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ನಾರಾಯಣ ಹೃದಯಲಯದ ತಜ್ಞ ಸಿಬ್ಬಂದಿ ಇಸಿಜಿ ತಂತ್ರಜ್ಞೆ ಸಲಾದೇವಿ, ಕಾವ್ಯ ಹಾಗೂ ವೆಂಕಟರಾಮ ರೆಡ್ಡಿ, ರವಿಕುಮಾರ್, ರಮೇಶ್ ರವರು ಪಾಲ್ಗೊಂಡು ನೂರಕ್ಕೂ ಹೆಚ್ಚು ಗ್ರಾಮಸ್ಥರಿಗೆ ಉಚಿತವಾಗಿ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಸಂಬAಧಿ ಕಾಯಿಲೆಗಳ ತಪಾಸಣೆ ನಡೆಸಿ, ಸೂಕ್ತ ಸಲಹೆ ಮತ್ತು ಔಷಧೋಪಚಾರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸಾವಿತ್ರಮ್ಮ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್, ಶಾಲೆಯ ಶಿಕ್ಷಕರಾದ ಸುನಂದಮ್ಮ, ಕೃಷಿ ಮೇಲ್ವಿಚಾರಕರಾದ ಗೋವಿಂದ ನಾಯ್ಕ್, ವಲಯದ ಮೇಲ್ವಿಚಾರಕರಾದ ಜ್ಯೋತಿ ಹಾಗೂ ಸ್ಥಳೀಯ ಸೇವಾಪ್ರತಿನಿಧಿಗಳಾದ ನಾಗರತ್ನ, ಪ್ರತಿಮಾ, ಶಕುಂತಲಾ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್