
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಸಾಲ ಮಾಡಿಕೊಂಡು ಖಜಾನೆ ಖಾಲಿ ಮಾಡಿಕೊಂಡು ಕುಳಿತಿರುವ ಕಾಂಗ್ರೆಸ್ ಸರ್ಕಾರ ಕಂದಾಯ ಶುಲ್ಕಗಳನ್ನು ಏರಿಸುವ ಮೂಲಕ ಬರಗಾಲದಲ್ಲಿ ಜನರ ಮೇಲೆ ಮತ್ತಷ್ಟು ಹೊರೆ ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, 11ಇ ನಕ್ಷೆ, ಪೂರ್ವನಕ್ಷೆ ಮತ್ತು ತತ್ಕಾಲ್ ಪೋಡಿ ಸೇವೆಗಳ ಶುಲ್ಕವನ್ನು 1,000 ರೂ.ನಿಂದ 3,200 ರೂ.ಗೆ ಹೆಚ್ಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಹದ್ದುಬಸ್ತು ಶುಲ್ಕವನ್ನು 300 ರೂ.ನಿಂದ 2,500 ರೂ.ಗೆ ಏರಿಸಲಾಗಿದೆ. ಇದಲ್ಲದೆ, ಈ ಹಿಂದೆ ಶುಲ್ಕ ರಹಿತವಾಗಿದ್ದ ನೋಟಿಸ್‌ಗೆ 35 ರೂ. ಹೊಸ ಶುಲ್ಕ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಂಚದ ಹಾವಳಿಯನ್ನು ತಡೆಗಟ್ಟಲು ಶುಲ್ಕ ಹೆಚ್ಚಿಸಲಾಗಿದೆ ಎಂಬುದು ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಕಾರಣವಾಗಿದೆ. ಲಂಚ ತಡೆಯಲು ನನಗೆ ಕರೆ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರೂ, ಲಂಚ ನಿಯಂತ್ರಣದ ಹೆಸರಿನಲ್ಲಿ ಜನರ ಮೇಲೆ ಹೊರೆ ಹೇರುವ ಪದ್ಧತಿ ಯಾವಾಗಿನಿಂದ ಜಾರಿಗೆ ಬಂದಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಒಂದು ಎಕರೆ ಜಮೀನನ್ನು ಸೋದರರು ತಮ್ಮೊಳಗೆ ಹಂಚಿಕೊಂಡು ಪೋಡಿ ಮಾಡಿಕೊಳ್ಳಲು ಕೂಡ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ರೈತ ಕುಟುಂಬದಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುವ ನಿಮಗೆ ರೈತರ ಕಷ್ಟ ಅರಿವಾಗುವುದು ಯಾವಾಗ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ಬರಗಾಲದ ಸಂದರ್ಭದಲ್ಲಿ ಬೆಳೆ ನಷ್ಟವನ್ನೇ ಭರಿಸಲಾಗದೆ ಸಂಕಷ್ಟದಲ್ಲಿರುವ ರೈತ ಕುಟುಂಬಗಳು ಇದೀಗ ಇಂತಹ ಶುಲ್ಕ ಏರಿಕೆಯ ಹೊರೆಗೂ ಒಳಗಾಗಬೇಕಾಗಿದೆ. ಒಂದು ಕಡೆ ಬಿಡಿಗಾಸಿನ ಪರಿಹಾರ, ಮತ್ತೊಂದು ಕಡೆ ಶುಲ್ಕಗಳ ಭಾರ ಎಂದು ಅಶೋಕ್ ಟೀಕಿಸಿದ್ದಾರೆ.
ಕಾಂಗ್ರೆಸ್ ಆಡಳಿತ ಎಂದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಆಡಳಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.