ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು: ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು
ಬೆಂಗಳೂರಿನ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ನಂದನ್ (25) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಾಯಿ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಅಮೃತಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Bengaluru-gym-trainer-suspicious-death-four-booked-for-murder


ಬೆಂಗಳೂರು, 05 ಅಕ್ಟೋಬರ್ (ಹಿ.ಸ.):

ನಗರದ ಹೆಬ್ಬಾಳದ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೃತರನ್ನು ನಂದನ್ (25) ಎಂದು ಗುರುತಿಸಲಾಗಿದೆ. ಶನಿವಾರ ಜಿಮ್ನ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಮುಗಿದ ಬಳಿಕ ತಡವಾದರೆ ಬೆಳಗ್ಗೆ ಮನೆಗೆ ಬರುವುದಾಗಿ ಮನೆಯವರಿಗೆ ತಿಳಿಸಿ ನಂದನ್ ತೆರಳಿದ್ದಾಗಿ ನಂದನ‌ ತಾಯಿ ಅಮೃತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆ್ಯನಿವರ್ಸರಿ ಕಾರ್ಯಕ್ರಮ ಮುಗಿದ ಬಳಿಕ ಜಿಮ್ನ ಇತರೆ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ಅಪಾರ್ಟ್ಮೆಂಟ್ಗೆ ತೆರಳಿದ್ದರು.

ಈ ವೇಳೆ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದಿದ್ದು, ನಂದನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂದನ್ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ನಂದನ್ ಅವರ ತಾಯಿ ಮಂಜುಳಾ, ಮಗನ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆಸಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹಲ್ಲೆಗೆ ನಿಖರ ಕಾರಣ ಹಾಗೂ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande