
ಬೆಂಗಳೂರು, 04 ಅಕ್ಟೋಬರ್ (ಹಿ.ಸ.):
ನಗರದ ನಾಗರಬಾವಿ ವ್ಯಾಪ್ತಿಯಲ್ಲಿ ಬಿಕಾಂ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು 19 ವರ್ಷದ ಯೋಗೇಶ್ ಪಾಪಣ್ಣ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 30ರಂದು ಮಧ್ಯಾಹ್ನ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿರುವ ಜಿಮ್ ಬಳಿ ಯೋಗೇಶ್ನನ್ನು ಮಾತುಕತೆಗೆಂದು ಕರೆಸಿಕೊಳ್ಳಲಾಗಿತ್ತು.
ಬಳಿಕ ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ಯೋಗೇಶ್ನ ಎದೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯೋಗೇಶ್ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ವಿಚಾರವಾಗಿ ಉಂಟಾದ ವೈಯಕ್ತಿಕ ವೈಮನಸ್ಸೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದಲ್ಲಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ಬಾಲಕರ ವಸತಿ ಗೃಹಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ ಘಟನೆ ಯುವತಿಯೊಬ್ಬಳಿಗೆ ಸಂಬಂಧಿಸಿದ ವಿಚಾರದಿಂದ ಉಂಟಾದ ಗಲಾಟೆಯ ಪರಿಣಾಮ ಎಂಬುದು ತಿಳಿದುಬಂದಿದೆ.
ಬಂಧಿತ ಆರೋಪಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R