
ಬೆಂಗಳೂರು, 04 ಅಕ್ಟೋಬರ್ (ಹಿ.ಸ.):
ಬರಗಾಲದ ಸಂದರ್ಭದಲ್ಲಿ ರೈತರಿಗೆ ನೆರವಾಗಲು ನಿಯಮಗಳಲ್ಲಿ ತಾತ್ಕಾಲಿಕ ವಿನಾಯಿತಿ ನೀಡುವುದು ಸರ್ಕಾರದ ಕರ್ತವ್ಯ. ಆದರೆ ರಾಜ್ಯದ ರೈತರು ತೀವ್ರ ಬರದಿಂದ ಕಂಗೆಟ್ಟಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತು ಕೇಂದ್ರ ಸರ್ಕಾರವನ್ನೇ ಪರಿಹಾರಕ್ಕಾಗಿ ಸಂಪೂರ್ಣವಾಗಿ ನಂಬಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಸರ್ಕಾರ ತನ್ನಿಂದ ರೈತರಿಗೆ ಏನು ನೆರವು ನೀಡಬಹುದು ಎಂಬುದನ್ನು ಆಲೋಚಿಸುವಷ್ಟೂ ಸಮಯವಿಲ್ಲದ ಕಾಂಗ್ರೆಸ್ ನಾಯಕರು ಎಸ್‌ಐಆರ್, ಭಾರತ್ ಜೋಡೋ ಎಂದು ಬೀದಿ ಸುತ್ತುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಲಮನ್ನಾ ಕುರಿತು ಮಾತನಾಡಿ ಪ್ರಚಾರ ಪಡೆದುಕೊಂಡಿದ್ದರು. ಆದರೆ ನಂತರ ಈ ಬಗ್ಗೆ ಯಾವುದೇ ಕ್ರಮದ ಬಗ್ಗೆ ಮಾತನಾಡಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.
ಬ್ಯಾಂಕರ್‌ಗಳ ರಾಜ್ಯಮಟ್ಟದ ಸಮಿತಿ ಸಾಲಗಳ ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡಿದೆ. ಆದರೆ ಸಾಲ ಪಡೆದು ಒಂದು ವರ್ಷದೊಳಗೆ ಮರುಪಾವತಿ ಮಾಡುವ ಅಥವಾ ಬಡ್ಡಿ ಪಾವತಿಸಿ ಸಾಲವನ್ನು ನವೀಕರಿಸುವ ರೈತರಿಗೆ ಮಾತ್ರ ಸರ್ಕಾರದಿಂದ ಶೇ.3ರ ಸಹಾಯಧನ ದೊರೆಯುತ್ತದೆ. ಒಂದು ದಿನ ತಡವಾದರೂ ಸಹಾಯಧನ ದೊರೆಯದೆ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬರದ ಸಮಯದಲ್ಲಿ ಸಾಲ ಮರುಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಅದು ರೈತರಿಗೆ ಯಾವುದೇ ಪ್ರಯೋಜನವಾಗದಿದ್ದರೆ ನಿಯಮಗಳಲ್ಲಿ ಬದಲಾವಣೆ ತರಬೇಕು. ಕಾಂಗ್ರೆಸ್ ಸರ್ಕಾರ ಕೂಡಲೇ ನಿಯಮಗಳನ್ನು ಬದಲಿಸಿ ಎಲ್ಲ ರೈತರಿಗೆ ಸಹಾಯಧನ ದೊರೆಯುವಂತೆ ಮಾಡಬೇಕು. ಕೇವಲ ಕಣ್ಕಟ್ಟಿನ ನಾಟಕ ಬೇಡ ಎಂದು ಅಶೋಕ್ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.