ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳಿಂದ ದುರ್ಗಾ ಮೂರ್ತಿಗಳ ಧ್ವಂಸ
ಢಾಕಾ, 04 ಅಕ್ಟೋಬರ್ (ಹಿ.ಸ.) ಬಾಂಗ್ಲಾದೇಶದ ಟಾಂಗೈಲ್ ಜಿಲ್ಲೆಯ ಮಿರ್ಜಾಪುರ ಉಪಜಿಲ್ಲೆಯ ಜಮುರ್ಕಿ ಪಶ್ಚಿಮಪಾರಾದಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ದುರ್ಗಾ ಪೂಜೆಗಾಗಿ ಸಿದ್ಧಪಡಿಸಲಾಗುತ್ತಿದ್ದ ಏಳು ಮೂರ್ತಿಗಳನ್ನು ಸಮಾಜವಿರೋಧಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಬುಧವಾರ ರಾತ್ರಿ ಹಾಗೂ ಗುರುವಾ
खंडित की गई मूर्तियां। फोटो - द डेली स्टार


ಢಾಕಾ, 04 ಅಕ್ಟೋಬರ್ (ಹಿ.ಸ.)

ಬಾಂಗ್ಲಾದೇಶದ ಟಾಂಗೈಲ್ ಜಿಲ್ಲೆಯ ಮಿರ್ಜಾಪುರ ಉಪಜಿಲ್ಲೆಯ ಜಮುರ್ಕಿ ಪಶ್ಚಿಮಪಾರಾದಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ದುರ್ಗಾ ಪೂಜೆಗಾಗಿ ಸಿದ್ಧಪಡಿಸಲಾಗುತ್ತಿದ್ದ ಏಳು ಮೂರ್ತಿಗಳನ್ನು ಸಮಾಜವಿರೋಧಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆ ನಡುವಿನ ಅವಧಿಯಲ್ಲಿ ಘಟನೆ ನಡೆದಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹಾಗೂ ಪೊಲೀಸರು ತಿಳಿಸಿದ್ದಾರೆ.

‘ದಿ ಡೈಲಿ ಸ್ಟಾರ್’ ವರದಿ ಪ್ರಕಾರ, ಜಮುರ್ಕಿ ಆರ್ಯ ಸಮಿತಿಯ ಆಶ್ರಯದಲ್ಲಿ ಸುಮಾರು 85 ವರ್ಷಗಳಿಂದ ದೇವಾಲಯದಲ್ಲಿ ದುರ್ಗಾ ಪೂಜೆ ಆಚರಿಸಲಾಗುತ್ತಿದೆ. ಈ ವರ್ಷವೂ ಉತ್ಸವದ ಸಿದ್ಧತೆ ನಡೆಯುತ್ತಿದ್ದು, ದುರ್ಗಾ ದೇವಿಯ ಮೂರ್ತಿ ಸೇರಿದಂತೆ ಏಳು ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಬಣ್ಣ ಹಚ್ಚುವ ಕೆಲಸ ಹೊರತುಪಡಿಸಿ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.

ಜಮುರ್ಕಿ ಆರ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಬಕಾಲಿ ಮಾತನಾಡಿ, ಬುಧವಾರ ರಾತ್ರಿ 10 ಗಂಟೆಯವರೆಗೆ ದೇವಾಲಯದಲ್ಲಿದ್ದೆವು. ಬಳಿಕ ಮನೆಗೆ ತೆರಳಿದ್ದೆವು. ಬೆಳಗ್ಗೆ ದೇವಾಲಯಕ್ಕೆ ಮರಳಿದಾಗ ಮೂರ್ತಿಗಳು ಧ್ವಂಸಗೊಂಡಿರುವುದು ಕಂಡುಬಂದಿತು. ಇದನ್ನು ಯಾರು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಈ ಕುರಿತು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಘಟನೆ ಬಳಿಕ ಟಾಂಗೈಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶಮ್ಸುಲ್ ಆಲಂ ಸರ್ಕಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿಂದೂ ಸಮುದಾಯದ ಸದಸ್ಯರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಸಮುದಾಯದಲ್ಲಿ ಅಸುರಕ್ಷಿತ ಭಾವನೆ ಮೂಡಿದೆ.

ಚಿನ್ಮಯ ಕೃಷ್ಣ ದಾಸ್ ಬಿಡುಗಡೆಗೆ ಆಗ್ರಹ

ಇದೇ ವೇಳೆ, ‘ನ್ಯೂಸ್ ಏಜ್ ಬಾಂಗ್ಲಾದೇಶ’ ವರದಿ ಪ್ರಕಾರ, ಹಿಂದೂ ಸಂತ ಚಿನ್ಮಯ ಕೃಷ್ಣ ದಾಸ್ ಅವರ ಬಿಡುಗಡೆಗೆ ಆಗ್ರಹಿಸಿ ಶನಿವಾರ ಭಾರತದ ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಉಪ ರಾಯಭಾರಿ ಕಚೇರಿ ಬಳಿ ಸುಮಾರು 100 ಮಂದಿ ಪ್ರತಿಭಟನೆ ನಡೆಸಿದರು. ಚಿನ್ಮಯ ಕೃಷ್ಣ ದಾಸ್ ಅವರು 2024ರಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದಾರೆ.

ವಿವೇಕಾನಂದ ಮಿಷನ್ ಸೇವಾ ಪ್ರತಿಷ್ಠಾನ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿ ಆಫ್ ಇಂಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಪ್ರತಿಭಟನಾಕಾರರು ಸಿಯಾಲ್ದಹ್ ರೈಲು ನಿಲ್ದಾಣದಿಂದ ಬಾಂಗ್ಲಾದೇಶ ಉಪ ರಾಯಭಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಾಂಗ್ಲಾದೇಶ ಉಪ ರಾಯಭಾರಿ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ಪೊಲೀಸರು ಕಚೇರಿ ಸಮೀಪ ಮೆರವಣಿಗೆಯನ್ನು ತಡೆದು, ಐವರು ಪ್ರತಿನಿಧಿಗಳನ್ನು ಚಾನ್ಸರಿವರೆಗೆ ಕರೆದೊಯ್ದರು. ಅಲ್ಲಿ ಚಾನ್ಸರಿ ಮುಖ್ಯಸ್ಥರು ಮತ್ತು ಎರಡನೇ ಕಾರ್ಯದರ್ಶಿ ಮನವಿಪತ್ರ ಸ್ವೀಕರಿಸಿದರು.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರತಿನಿಧಿಗಳು ದುರ್ಗಾ ಪೂಜೆಗಾಗಿ ಹೆಚ್ಚುವರಿ ಅನುದಾನ ನೀಡಿರುವುದಕ್ಕೆ ಹಾಗೂ ರಜೆಯನ್ನು ಐದು ದಿನಗಳಿಗೆ ವಿಸ್ತರಿಸಿರುವುದಕ್ಕೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರಹಮಾನ್ ಅವರಿಗೆ ಧನ್ಯವಾದ ಸಲ್ಲಿಸಿದರು. ದುರ್ಗಾ ಪೂಜೆ ಹಾಗೂ ಅದರ ನಂತರವೂ ಹಿಂದೂ ಅಲ್ಪಸಂಖ್ಯಾತರ ಭದ್ರತೆಯನ್ನು ಖಚಿತಪಡಿಸಬೇಕು ಎಂದು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸಿದರು. ನ್ಯಾಯ ಒದಗಿಸುವುದರ ಜತೆಗೆ ಚಿನ್ಮಯ ಕೃಷ್ಣ ದಾಸ್ ಅವರನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande