
ಹುಬ್ಬಳ್ಳಿ, 04 ಅಕ್ಟೋಬರ್ (ಹಿ.ಸ.):
ಸನಾತನ ಧರ್ಮದ ರಕ್ಷಣೆ, ಗೋ ಸಂರಕ್ಷಣೆ, ಹಿಂದೂ ಸಮಾಜದ ಜಾಗೃತಿ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಿಕೆಗೆ ಅಶೋಕ ಸಿಂಘಾಲ್ ಅವರು ತಮ್ಮ ಇಡೀ ಜೀವನವನ್ನು ಸಮರ್ಪಿಸಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ಆಯೋಜಿಸಿದ್ದ ಅಶೋಕ ಸಿಂಘಾಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮಜನ್ಮಭೂಮಿ ಚಳವಳಿಯ ಪ್ರಮುಖ ನಾಯಕರಾಗಿ ಹಾಗೂ ವಿಶ್ವದಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸುವಲ್ಲಿ ಅಶೋಕ ಸಿಂಘಾಲ್ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಎಂದು ಪ್ರಹ್ಲಾದ ಜೋಶಿ ಸ್ಮರಿಸಿದರು.
ಅವರ ಧರ್ಮನಿಷ್ಠೆ, ರಾಷ್ಟ್ರಭಕ್ತಿ, ತ್ಯಾಗ, ದೇಶಸೇವೆಯ ಬದ್ಧತೆ, ತತ್ತ್ವಾದರ್ಶಗಳು ಮತ್ತು ಸೇವೆಯ ಹಾದಿ ನಮ್ಮೆಲ್ಲರಿಗೂ ಸದಾ ಮಾರ್ಗದರ್ಶಕವಾಗಿರಲಿ ಎಂದು ಅವರು ಹೇಳಿದರು.
ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕೊಂಚೂರುಮಠದ ಪೂಜ್ಯ ಶ್ರೀ ಸವಿತಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಪರ್ಕ ಪ್ರಮುಖರಾದ ಸುಧೀರಸಿಂಗ ಘೋರ್ಪಡೆ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಉಳ್ಕಿಹಾಳ, ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ಜಿ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರದ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಸೇರಿದಂತೆ ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.