
ಬೆಂಗಳೂರು, 31 ಅಕ್ಟೋಬರ್ (ಹಿ.ಸ.):
ಉಕ್ಕಿನ ಮನುಷ್ಯ, ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ವಿಷಮ ಸನ್ನಿವೇಶದಲ್ಲಿ ತಮ್ಮ ದೃಢ ಸಂಕಲ್ಪ ಮತ್ತು ಅದ್ವಿತೀಯ ರಾಜತಾಂತ್ರಿಕ ಚತುರತೆಯ ಮೂಲಕ ದೇಶ ಛಿದ್ರವಾಗದಂತೆ ಕಾಪಾಡಿದವರು ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಸ್ಮರಿಸಿದ್ದಾರೆ.
ಬಾರ್ದೋಲಿ ಸತ್ಯಾಗ್ರಹದ ರೈತ ಹೋರಾಟದಿಂದ ಹಿಡಿದು ದೇಶದ ಆಡಳಿತಕ್ಕೆ ಬೆನ್ನೆಲುಬಾಗಿ ನಿಲ್ಲುವ ಅಖಿಲ ಭಾರತ ನಾಗರಿಕ ಸೇವೆಗಳ ಭದ್ರ ಅಡಿಪಾಯ ಹಾಕುವವರೆಗೆ ಅವರ ಕೊಡುಗೆ ಅವಿಸ್ಮರಣೀಯ. ಅವರು ಕಟ್ಟಿಕೊಟ್ಟ ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಉಕ್ಕಿನ ಮನುಷ್ಯ, ಭಾರತದ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಂದು ಗೌರವಪೂರ್ವಕ ನಮನಗಳು ಎಂದು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಕೂಡ ಪಟೇಲರ ಜನ್ಮ ಜಯಂತಿಯಂದು ಗೌರವ ಸಲ್ಲಿಸಿದ್ದಾರೆ. ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 500ಕ್ಕೂ ಹೆಚ್ಚು ರಾಜಪ್ರಭುತ್ವಗಳನ್ನು ಒಂದೇ ಪ್ರಜಾಪ್ರಭುತ್ವದ ಸೂರಿನಡಿ ತರುವಲ್ಲಿ ಯಶಸ್ವಿಯಾಗಿದ್ದರು. ಈ ಸಾಧನೆಯಿಂದಲೇ ಅವರು ಉಕ್ಕಿನ ಮನುಷ್ಯರೆಂದು ಖ್ಯಾತಿ ಪಡೆದರು. ರಾಷ್ಟ್ರದ ಹೆಮ್ಮೆಯ ಪುತ್ರನ ಜನ್ಮ ಜಯಂತಿಯಂದು ಆ ಮಹಾನ್ ನಾಯಕನಿಗೆ ಶತಶತ ನಮನಗಳು ಎಂದು ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.