


ಕುರುಗೋಡು, 31 ಅಕ್ಟೋಬರ್ (ಹಿ.ಸ.)
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಉಪಕೇಂದ್ರದ ಆವರಣದಲ್ಲಿ ಇತ್ತೀಚೆಗೆ ‘ವಿಶ್ವ ಪಾರ್ಶ್ವವಾಯು ದಿನ’ವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು, ಪ್ರತಿವರ್ಷ ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಪಾರ್ಶ್ವವಾಯುವಿನ ಲಕ್ಷಣಗಳು, ಮುನ್ನೆಚ್ಚರಿಕೆ ಹಾಗೂ ತುರ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಮೆದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಅಥವಾ ಮೆದುಳಿನಲ್ಲಿ ರಕ್ತಸ್ರಾವವಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಹಠಾತ್ ದೌರ್ಬಲ್ಯ, ಮಾತಿನಲ್ಲಿ ತೊದಲುವಿಕೆ ಕಂಡುಬ0ದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ವಿಳಂಬ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಪೌಷ್ಟಿಕ ಆಹಾರ ಸೇವನೆ, ಉಪ್ಪಿನ ಬಳಕೆ ಕಡಿಮೆ ಮಾಡುವುದು, ನಿಯಮಿತ ವ್ಯಾಯಾಮ ಹಾಗೂ ಧೂಮಪಾನ, ತಂಬಾಕು ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಪಾರ್ಶ್ವವಾಯುವನ್ನು ತಡೆಗಟ್ಟಬಹುದು. 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗಣ್ಣನವರ್ ಅವರು ಮಾತನಾಡಿ, ತಾಯಿ-ಮಕ್ಕಳ ಆರೋಗ್ಯ ರಕ್ಷಣೆ, ಸೋಂಕು ಹರಡುವ ಸೊಳ್ಳೆಗಳಿಂದ ಬರುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಹಾಗೂ ಕ್ಷಯ ಮತ್ತು ಕುಷ್ಟರೋಗ ನಿರ್ಮೂಲನೆ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರೇಶ್ ಅವರು ಬಾಲ್ಯವಿವಾಹ ನಿಷೇಧ, ಪೌಷ್ಟಿಕ ಆಹಾರ, ಗ್ರಾಮದ ಸ್ವಚ್ಛತೆ, ಹಾವು ಕಡಿತ ಹಾಗೂ ನಾಯಿ ಕಡಿತ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಧರಣಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್