
ಬಳ್ಳಾರಿ, 31 ಅಕ್ಟೋಬರ್ (ಹಿ.ಸ.)
ಭಾರತೀಯ ಸೇನೆ ಹಾಗೂ ಇತರ ಯೂನಿಫಾರ್ಮ್ ಸೇವೆಗಳಿಗೆ ಸೇರಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ಪೂರ್ವಸಿದ್ಧತಾ ತರಬೇತಿಯನ್ನು ನೀಡಲಾಗುತ್ತಿದ್ದು, 2026-27ನೇ ಸಾಲಿನ 2ನೇ ತಂಡಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ (ಬಾಲಕರಿಗೆ ಮಾತ್ರ).
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಜಿಲ್ಲಾ ಅಥವಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಬೆಳಗಾವಿಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ.
*ಅರ್ಹತೆಗಳು:*
ಪ್ರವರ್ಗ-1ರ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ಗರಿಷ್ಠ 2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ 1 ಲಕ್ಷ ನಿಗದಿಪಡಿಸಲಾಗಿದೆ.
ಅಭ್ಯರ್ಥಿಯು 10ನೇ ತರಗತಿಯಲ್ಲಿ ಕನಿಷ್ಠ ಶೇ. 45ರಷ್ಟು ಸರಾಸರಿ ಅಂಕಗಳೊ0ದಿಗೆ ಉತ್ತೀರ್ಣರಾಗಿರಬೇಕು (ಪ್ರತಿ ವಿಷಯದಲ್ಲೂ ಕನಿಷ್ಠ 33 ಅಂಕ ಪಡೆದಿರಬೇಕು) ಅಥವಾ ಇದಕ್ಕೆ ಸಮಾನವಾದ ಗ್ರೇಡ್ ಹೊಂದಿರಬೇಕು.
ಅಭ್ಯರ್ಥಿಗಳು 16-11-2006 ರಿಂದ 16-11-2009 ರ ನಡುವೆ ಜನಿಸಿರಬೇಕು (16-11-2026 ಕ್ಕೆ ಅನ್ವಯಿಸುವಂತೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ).
*ತರಬೇತಿಯ ಸೌಲಭ್ಯಗಳು:*
ತರಬೇತಿಯು ಬೆಳಗಾವಿಯಲ್ಲಿ ನಡೆಯಲಿದ್ದು, ಒಟ್ಟು 4 ತಿಂಗಳ ಕಾಲಾವಧಿಯದ್ದಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಒಂದು ಜೊತೆ ಸೂಟ್, ಶೂ ಹಾಗೂ ಸಮವಸ್ತನೀಡಲಾಗುತ್ತದೆ. 4 ತಿಂಗಳ ಅವಧಿಯಲ್ಲಿ ದೈಹಿಕ ಸಹಿಷ್ಣುತೆ ಮತ್ತು ಲಿಖಿತ ಪರೀಕ್ಷೆಗಳಿಗೆ ಸಮಗ್ರ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-11-2026
*ಅರ್ಜಿ ಸಲ್ಲಿಸಬೇಕಾದ ವಿಳಾಸ ಮತ್ತು ಸಂಪರ್ಕ ಮಾಹಿತಿ:*
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು,
ಕೊಠಡಿ ಸಂಖ್ಯೆ: 204, 2ನೇ ಮಹಡಿ, ಸುವರ್ಣ ವಿಧಾನ ಸೌಧ,
ಹಲಗಾ, ಬೆಳಗಾವಿ - 590010.
ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0831-2407221 (ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ, ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ) ಸಂಪರ್ಕಿಸಬಹುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್