ಮಂಡ್ಯಕ್ಕೆ ಸಿಎಂ ಭೇಟಿ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಡಿ.ಎಸ್.ಎಸ್ ನಿರ್ಧಾರ
ಮಂಡ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುವ ಮುನ್ನವೇ ಪ್ರತಿಭಟನೆಯ ಎಚ್ಚರಿಕೆ ಎದುರಾಗಿದೆ. ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ದುರ್ಬಳಕೆ ಆರೋಪಿಸಿ ದಲಿತ ಸಂಘಟನೆಗಳು ಕಪ್ಪುಪಟ್ಟಿ ಪ್ರದರ್ಶನಕ್ಕೆ ಹಾಗೂ ಮಂಡ್ಯ ಜನರ ಕುರಿತ ಹಳೆಯ ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿ ರೈತ ಮುಖಂಡರು ಕಪ್ಪು ಬ
protests-against-cm-dk-shivakumar-ahead-of-mandya-visit


ಮಂಡ್ಯ, 30 ಅಕ್ಟೋಬರ್ (ಹಿ.ಸ.):

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ ಮಂಡ್ಯಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ವಿಚಾರಗಳನ್ನು ಮುಂದಿಟ್ಟುಕೊಂಡು ದಲಿತ ಸಂಘಟನೆಗಳು ಹಾಗೂ ರೈತ ಮುಖಂಡರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ಖಂಡಿಸಿ ಕಪ್ಪುಪಟ್ಟಿ ಪ್ರದರ್ಶಿಸಲು ದಲಿತ ಸಂಘಟನೆಗಳು ನಿರ್ಧರಿಸಿದ್ದರೆ, ಈ ಹಿಂದೆ ಮಂಡ್ಯ ಜನರ ಕುರಿತು ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕಪ್ಪು ಬಾವುಟ ಪ್ರದರ್ಶಿಸಲು ರೈತ ಮುಖಂಡರು ಮುಂದಾಗಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣ ಬಳಕೆ ಆರೋಪ

ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗೆ ಸರ್ಕಾರ ಅಡ್ಡಿಯಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ. ಶ್ರೀನಿವಾಸ್ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ದಲಿತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವನ್ನು ಬಳಸಲಾಗುತ್ತಿದೆ. ಬಜೆಟ್ನಲ್ಲಿ ಸುಮಾರು 46 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದರೂ ಅದನ್ನು ಸಮರ್ಪಕವಾಗಿ ಹೊಂದಾಣಿಕೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಸಮುದಾಯದ ಜನರ ಸ್ಥಿತಿ ಮತ್ತಷ್ಟು ಕೆಳಮಟ್ಟಕ್ಕೆ ತಲುಪಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಅ.31ರಂದು ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಹಾಗೂ ಘೇರಾವ್ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಕುರಿತು ಡಿಎಸ್ಎಸ್ ಜಿಲ್ಲಾಧ್ಯಕ್ಷ ಚನ್ನಕೇಶವ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮಂಡ್ಯದವರು ಛತ್ರಿಗಳು' ಹೇಳಿಕೆಗೆ ಕ್ಷಮೆಯಾಚಿಸಲು ಆಗ್ರಹ

ಇನ್ನೊಂದೆಡೆ, ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಮಂಡ್ಯದ ಜನರನ್ನು 'ಛತ್ರಿಗಳು' ಎಂದು ಕರೆದಿದ್ದ ಹಳೆಯ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಈ ಹೇಳಿಕೆಗೆ ಮಂಡ್ಯ ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು ಎಂದು ರೈತ ಮುಖಂಡ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸ್ವಾಭಿಮಾನದ ಕೋಟೆ ಎಂದೇ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆಗೆ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅನೇಕ ಪ್ರಮುಖ ರಾಜಕೀಯ ನಾಯಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿರುವ ಜಿಲ್ಲೆಯ ಜನರನ್ನು ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲೆಯ ಜನರು ಆರು ಮಂದಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ರಾಜಕೀಯ ನಾಯಕರನ್ನು ಬೆಳೆಸಿರುವ ಮಂಡ್ಯದ ಜನರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯಕ್ಕೆ ಕಾಲಿಡುವ ಮುನ್ನವೇ ತಮ್ಮ ಹಿಂದಿನ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಾಳೆ ಮುಖ್ಯಮಂತ್ರಿಗಳ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ನಮ್ಮನ್ನು ಬಂಧಿಸಿದರೂ ಚಿಂತೆಯಿಲ್ಲ, ಆದರೆ ಮಂಡ್ಯ ಜಿಲ್ಲೆಯ ಜನರ ಕ್ಷಮೆ ಕೇಳಲೇಬೇಕು ಎಂದು ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande