
ಮೈಸೂರು, 30 ಅಕ್ಟೋಬರ್ (ಹಿ.ಸ.):
ಮೈಸೂರು ಅರಮನೆ ಹಾಗೂ ಅಂಬಾರಿ ವಿಚಾರವಾಗಿ ತಾವು ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿದ್ದು, ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಅರಮನೆ ಸರ್ಕಾರದ ಆಸ್ತಿಯಾಗಿದೆ.
ಅರಮನೆ ಸ್ವಾಧೀನ ಕಾಯ್ದೆಯ ಪ್ರಕಾರವೇ ತಾವು ಮಾತನಾಡಿದ್ದು, ತಮ್ಮ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ನನ್ನ ಹೇಳಿಕೆಯಲ್ಲಿ ತಪ್ಪಿದ್ದರೆ ಕ್ಷಮೆ ಕೇಳಬಹುದಿತ್ತು. ಆದರೆ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವುದಿಲ್ಲ. ಅಂಬಾರಿ ಮತ್ತು ಅರಮನೆ ವಿಚಾರದಲ್ಲಿ ನಾನು ತಪ್ಪಾಗಿ ಮಾತನಾಡಿಲ್ಲ ಎಂದು ಹೇಳಿದರು.
ರಾಜಮನೆತನದವರೊಂದಿಗೆ ಮುಖ್ಯಮಂತ್ರಿಗಳೇ ಮಾತನಾಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ತಾವು ಪ್ರತ್ಯೇಕವಾಗಿ ಹೋಗಿ ಮಾತನಾಡುವ ಅಗತ್ಯವಿಲ್ಲ. ಅವರು ಆಹ್ವಾನಿಸಿದರೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ತಿಳಿಸಿದರು.
ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಸರ್ಕಾರದಿಂದ ಉತ್ತರ
ದಸರಾ ಆಚರಣೆ ಹಾಗೂ ಅರಮನೆ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಯತೀಂದ್ರ, ನಾವು ಮೊದಲಿನಿಂದಲೂ ಅವರ ಸಂಪರ್ಕದಲ್ಲಿದ್ದೇವೆ.
ಅವರಿಗೆ ಅಧಿಕೃತವಾಗಿ ಸ್ವಾಗತ ಕೋರಿದ್ದೇವೆ. ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ದಸರಾ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರವನ್ನೂ ನೀಡಿದ್ದೇವೆ.
ವಿಜಯದಶಮಿಯಂದು ಜಟ್ಟಿಕಾಳಗದ ವೇಳೆ ಮಾತ್ರ ಗೊಂದಲ ಉಂಟಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ತೊಂದರೆಯಾಗಿಲ್ಲ. ಆದರೂ ಅವರು ಪತ್ರ ಬರೆದಿದ್ದಾರೆ.
ಸರ್ಕಾರ ಅಥವಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರೆ ಉತ್ತರ ನೀಡಲಾಗುತ್ತಿತ್ತು. ಈಗಲೂ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ನೀಡಲಾಗುವುದು ಎಂದರು.
ಏಳು ದಿನಗಳ ದಸರಾ ಆಚರಣೆ ಬೇಡ, ಎರಡು ದಿನ ಅರಮನೆಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಡಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸರ್ಕಾರವೇ ಅಧಿಕೃತ ಉತ್ತರ ನೀಡಲಿದೆ. ಸದ್ಯಕ್ಕೆ ಈ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರಾಜಮನೆತನದವರೊಂದಿಗೆ ಮಾತನಾಡಲು ಸರ್ಕಾರ ಸಿದ್ಧವಿದ್ದು, ಅವರು ಕರೆದರೆ ಹೋಗಿ ಚರ್ಚಿಸುತ್ತೇವೆ ಎಂದರು.
ಪ್ರತಿವರ್ಷ ದಸರಾ ಸಂದರ್ಭದಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಂದರ್ಭದಲ್ಲಿ ಕೆಲವು ಅನಿವಾರ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.
ಅಂಬಾರಿ ಇಲ್ಲದೆ ಜಂಬೂಸವಾರಿ ನಡೆಸಲು ಸಾಧ್ಯವಿಲ್ಲ. ಸರ್ಕಾರಿ ಕಾರ್ಯಕ್ರಮವನ್ನು ಏಳು ದಿನಗಳ ಕಾಲ ನಡೆಸುವ ವಿಚಾರವಾಗಿ ಅಂಬಾರಿ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆಯಲಾಗಿತ್ತು. ಆ ಪತ್ರಕ್ಕೆ ತಾವು ಪ್ರತಿಕ್ರಿಯೆ ನೀಡಿದ್ದಾಗಿ ತಿಳಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣ: ಇಬ್ಬರ ಬಂಧನಕ್ಕೆ ಒತ್ತಾಯ
ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಈ ಸಂಬಂಧ ಈಗಾಗಲೇ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ.
ತನಿಖೆ ನಡೆಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ನಲ್ಲಿ ಕಾಣಿಸಿಕೊಂಡಿರುವ ಇಬ್ಬರನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಬೇಕು. ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R